ಸಿಂಧನೂರು: ನಗರದ ಪಿಡಬ್ಲುೃಡಿಕ್ಯಾಂಪ್ ಸಂಚಾರಿ ಪೊಲೀಸ್ ಠಾಣೆ ಬಳಿ ನಿರ್ಮಾಣವಾಗುತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಾಮಗಾರಿ ಕಳೆ ದಿನಗಳಿಂದ ಚುರುಕುಗೊಂಡಿದ್ದು, ಕಟ್ಟಡದ ಹೊರಮೈಗೆ ಸುಣ್ಣ ಬಳಿಯುವ ಕೆಲಸ ನಡೆದಿದೆ.
ತಾಲೂಕಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ 11 ಕೋಟಿ ರೂ. ಮಂಜೂರು ಮಾಡಿತ್ತು. ಇದು 60 ಹಾಸಿಗೆಯ ಸೌಲಭ್ಯವುಳ್ಳ ಆಸ್ಪತ್ರೆಯಾಗಿದ್ದು, 3 ಜನ ಪ್ರಸೂತಿ ತಜ್ಞರು ಸೇರಿ ಆರೋಗ್ಯ ಸಿಬ್ಬಂದಿಯ ಅವಶ್ಯಕತೆ ಇದೆ ಎಂದು ಏಪ್ರಿಲ್ 28, 2020ರಂದು ಅಂದಿನ ಶಾಸಕರು ಹೇಳಿದ್ದರು. ಆದರೆ ನಾಲ್ಕು ವರ್ಷ ಗತಿಸಿದರೂ ಇನ್ನೂ ಆಸ್ಪತ್ರೆ ಕಟ್ಟಡ ಕಾಮಗಾರಿ ಕುಂಟುತ್ತಾ ಸಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿತ್ತು.
ಈ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ಏಪ್ರಿಲ್ 16 ರಂದು ‘ತಾಯಿ-ಮಕ್ಕಳ ಆಸ್ಪತ್ರೆಗೆ ಗ್ರಹಣ ಎಂಬ ತಲೆಬಹರದ್ಡಿ ಸುದ್ದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಕಳೆದ ತಿಂಗಳಿಂದ ಕಾಮಗಾರಿ ಚುರುಕುಗೊಳಿಸಿದ್ದಾರೆ. ಈಗಾಗಲೇ ಕಟ್ಟಡ ಪ್ಲಾಸ್ಟರ್ ಮುಗಿದು ಈಗ ಸುಣ್ಣ ಬಳೆಯಲಾಗುತ್ತಿದ್ದು, ಪಿಠೋಪಕರಣ ಒದಗಿಸುವುದಷ್ಟೇ ಬಾಕಿ ಉಳಿಯಲಿದೆ.
ಡೆಂಘೆ ಉಲ್ಬಣ, ಚಿಕಿತ್ಸೆಗೆ ಪರದಾಟ ಇನ್ನೂ ಕಳೆದ ಕೆಲವು ದಿನಗಳಿಂದ ಡೆಂಗೆ ಹಾವಳಿಯಿಂದಾಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವವರ ಸಂಖ್ಯೆ ಹೆಚ್ಚಿದೆ. ಅಗತ್ಯ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಬಂದ ರೋಗಿಗಳು ಸಕಾಲಕ್ಕೆ ಚಿಕಿತ್ಸೆ ಸಿಗದೇ ಖಾಸಗಿ ಆಸ್ಪತ್ರೆ ದಾರಿ ಹಿಡಿಯುತ್ತಿದ್ದಾರೆ. ರೋಗಿಗಳ ಸಂಖ್ಯೆಗೆ ತಕ್ಕಂತೆ ಆಸ್ಪತ್ರೆಯ ಕಟ್ಟಡ ಚಿಕ್ಕದಾಗಿದೆ. ಕೂಡಲೇ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬೇಗ ಆರಂಭಿಸಿದರೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ವಿಶೇಷವಾಗಿ ಚಿಕಿತ್ಸೆ ಒದಗಿಸಲು ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸಿಂಧನೂರಿನಲ್ಲಿ ತಾಯಿ -ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ ವಿಳಂಬದ ಬಗ್ಗೆ ಮೇಲಧಿಕಾರಿ ಗಳಿಗೆ ಪತ್ರ ಬರೆಯಲಾಗಿತ್ತು. ಕಳೆದ ತಿಂಗಳಿಂದ ಕಾಮಗಾರಿ ಚುರುಕು ಗೊಳಿಸಲಾಗಿದೆ. ಶೀಘ್ರವೇ ಕಟ್ಟಡ ಪೂರ್ಣಗೊಂಡರೆ ಹೆಚ್ಚಿನ ಅನುಕೂಲ ವಾಗಲಿದೆ. ಈಗ ಆಸ್ಪತ್ರೆಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಜಾಗ ಸಣ್ಣದಿರುವುದರಿಂದ ಸಮಸ್ಯೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಸೇವೆ ಸಿಗಲಿದೆ.|ಡಾ.ನಾಗರಾಜ ಕಾಟ್ವಾ ಮುಖ್ಯವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ, ಸಿಂಧನೂರು.