ಸಿಂಧನೂರಿನ ತಹಸಿಲ್ ಕಚೇರಿಯ ಆಧಾರ್ ಕೇಂದ್ರದಲ್ಲಿ ಆಧಾರ್ ನೋಂದಣಿ-ತಿದ್ದುಪಡಿಗೆ ಸಾಲುಗಟ್ಟಿ ನಿಂತಿರುವ ಜನರು. 
ಜಿಲ್ಲೆ

ಆಧಾರ್ ನೋಂದಣಿ-ತಿದ್ದುಪಡಿಗೆ ಪರದಾಟ, ಬೆಳಗ್ಗೆ ಐದರಿಂದಲೇ ಕೇಂದ್ರದ ಎದುರು ಸರತಿ ಸಾಲು

ಕುರುವತ್ತಿ ಶ್ರೀಕಾಂತಪ್ಪ

ಸಿಂಧನೂರು: ಸರ್ಕಾರದ ಎಲ್ಲ ಯೋಜನೆಗಳಿಗೂ ಆಧಾರವಾಗಿರುವ ಆಧಾರ್ ಕಾರ್ಡ್ ನೋಂದಣಿ ಮತ್ತು ಹೆಸರು, ವಿಳಾಸ ತಿದ್ದುಪಡಿಗೆ ತಾಲೂಕಿನ ಜನರು ನಿತ್ಯ ಅಂಚೆ ಕಚೇರಿ-ಬ್ಯಾಂಕ್‌ಗಳಿಗೆ ಅಲೆದು ಹೈರಾಣಾಗಿದ್ದಾರೆ.

ಹೊಸದಾಗಿ ಆಧಾರ್ ಮಾಡಿಸಲು ಮತ್ತು ಹೆಸರು, ವಿಳಾಸ ತಿದ್ದುಪಡಿ ಮಾಡಲು ಅಂಚೆ ಕಚೇರಿ, ತಹಸಿಲ್ ಕಚೇರಿ ಹಾಗೂ ಕೆನರಾ (ಸಿಂಡಿಕೇಟ್ ಬ್ಯಾಂಕ್)ನಲ್ಲಿ ಅವಕಾಶ ಕಲ್ಪಿಸಿದ್ದು, ಈ ಎಲ್ಲ ಕೇಂದ್ರಗಳು ಜನರಿಂದ ಕಿಕ್ಕಿರಿದಿವೆ. ಸಕಾಲಕ್ಕೆ ಅರ್ಜಿ ಸ್ವೀಕರಿಸದೆ ಇರುವುದರಿಂದ ಜನರು ಪರದಾಡುವಂತಾಗಿದೆ.

ಅಂಚೆ ಕಚೇಯಲ್ಲಿ ದಿನಕ್ಕೆ ಹತ್ತು ಟೋಕನ್ ನೀಡುತ್ತಿದ್ದು, ಬೆಳಗ್ಗೆ ಐದರಿಂದಲೇ ಈ ಹತ್ತು ಟೋಕನ್‌ಗೆ ನೂರಾರು ಜನ ಕ್ಯೂ ನಿಲ್ಲುತ್ತಿದ್ದಾರೆ. ಹಳ್ಳಿಗರು ಕುಟುಂಬ ಸದಸ್ಯರೊಡನೆ ಆಧಾರ್ ಚೀಟಿಗಾಗಿ ಅರ್ಜಿ ಸಲ್ಲಿಸಲು ವಾರಗಟ್ಟಲೆ ಅಲೆದಾಡುವಂತಾಗಿದೆ. ಆದರೂ ಆಧಾರ್ ಕಾರ್ಡ್ ಮಾತ್ರ ಸಿಗುತ್ತಿಲ್ಲ.

ಇನ್ನು ತಹಸಿಲ್ ಕಚೇರಿ ಹಾಗೂ ಕೆನರಾ ಬ್ಯಾಂಕ್(ಸಿಂಡಿಕೇಟ್ ಬ್ಯಾಂಕ್) ಆಧಾರ್ ಕೇಂದ್ರದಲ್ಲೂ ಇದೇ ಪರಿಸ್ಥಿತಿ ಇದೆ. ತಾಲೂಕಿನಲ್ಲಿ 150ಕ್ಕೂ ಅಧಿಕ ಹಳ್ಳಿಗಳು ಹಾಗೂ 50 ಹೆಚ್ಚು ಕ್ಯಾಂಪ್‌ಗಳಿದ್ದು, ಮೂರೇ ಆಧಾರ್ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಇದರಿಂದ ಜನರು ಎಲ್ಲ ಕೆಲಸ ಬಿಟ್ಟು ಆಧಾರ್ ಕಾರ್ಡ್‌ಗಾಗಿಯೇ ದಿನಗಳನ್ನು ದೂಡುವಂತಾಗಿದೆ.

ಆಧಾರ್ ಕಾರ್ಡ್ ಕಡ್ಡಾಯವಲ್ಲವೆಂದು ಹೇಳುತ್ತಲೇ ಪ್ರತಿ ಯೋಜನೆ, ಅರ್ಜಿ, ಆಡಳಿತಾತ್ಮಕ ಸಮಸ್ಯೆಗಳಿಗೂ ಆಧಾರನ್ನೇ ಮುಖ್ಯವಾಗಿಸಿಕೊಂಡಿರುವುದರಿಂದ ಆಧಾರ್ ಮಾಡಿಸಲು ಅಥವಾ ತಿದ್ದುಪಡಿ ಗೋಳು ಮುಗಿಯುವಂತೆ ಕಾಣುತ್ತಿಲ್ಲ.

ತಾಲೂಕಿನ ಮೂರು ಕೇಂದ್ರದಲ್ಲಿ ಆಧಾರ್ ತಿದ್ದುಪಡಿ, ನೋಂದಣಿಗೆ ಟೋಕನ್‌ಗಳನ್ನು ನೀಡಿ, ಪ್ರಕ್ರಿಯೆ ನಡೆಯುತ್ತಿದ್ದರೂ, ಜನರ ಪರದಾಟ ಮಾತ್ರ ತಪ್ಪಿಲ್ಲ. ಟೋಕನ್ ಪಡೆಯಲು ಬೆಳಗ್ಗೆ 5-6 ಗಂಟೆಯಿಂದಲೇ ಆಗಮಿಸಿರುತ್ತಾರೆ. ಸರತಿ ಸಾಲಿನಲ್ಲಿ ನೂರಾರು ಜನ ನಿಲ್ಲುತ್ತಿದ್ದು ಇದರಲ್ಲಿ 30-35 ಜನರಿಗೆ ಮಾತ್ರ ಟೋಕನ್ ಸಿಕ್ಕಿರುತ್ತವೆ. ಮಕ್ಕಳು, ವೃದ್ಧರು, ಗಂರ್ಭಿಣಿಯರು ಸರತಿ ಸಾಲಿನಲ್ಲಿ ನಿಂತು ಸುಸ್ತಾಗುತ್ತಿದ್ದಾರೆ.

ಆಡಳಿತ ವ್ಯವಸ್ಥೆ ವಿರುದ್ಧ ಕಿಡಿ

ಆಧಾರ್ ಕಾರ್ಡ್ ಪಡೆಯಲು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಸುಸ್ತಾಗಿರುವ ಜನರು ಆಡಳಿತ ವ್ಯವಸ್ಥೆ ವಿರುದ್ಧವೇ ಹಿಡಿಶಾಪ ಹಾಕಲಾರಂಭಿಸಿದ್ದಾರೆ. ನಿತ್ಯ ನೂರಾರು ಜನ ಸರತಿನಲ್ಲಿ ನಿಂತಿದ್ದರೂ ಯಾರೂ ಕಾಳಜಿ ವಹಿಸುತ್ತಿಲ್ಲ. ಒಂದು ಅಂದಾಜು ಪ್ರಕಾರ ಮೂರು ಕೇಂದ್ರಗಳಲ್ಲಿ ನೂರರು ಸಂಖ್ಯೆಯ ಜನರು ಆಧಾರ್‌ಗಾಗಿ ಬರುತ್ತಿದ್ದಾರೆ. ಇವರಲ್ಲಿ 30-40 ಮಂದಿಗೆ ಟೋಕನ್ ನೀಡಿದರೆ ಹೇಗೆ ಎನ್ನುವ ಪ್ರಶ್ನೆ ಎದುರಾಗಿದೆ. ತಾಲೂಕು ಆಡಳಿತ ಈ ಹಿಂದೆ ಖಾಸಗಿಯಾಗಿಯೂ ಐದಾರು ಕೇಂದ್ರಗಳಿಗೆ ಅನುಮತಿ ನೀಡಿ ಸಮಸ್ಯೆ ಪರಿಹರಿಸಿತ್ತು. ಈಗಲೂ ಹಾಗೆಯೇ ಮಾಡಿದರೆ ಜನರ ಅಲೆದಾಟ ತಪ್ಪಿಸಬಹುದು.

ನಾನು ಬೇರೆ ಕಡೆ ಕೆಲಸ ಮಾಡುತ್ತಿದ್ದೇನೆ. ನನ್ನ ಮಕ್ಕಳ ಆಧಾರ್ ಚೀಟಿಗಾಗಿ ಕಳೆದ ವಾರದಿಂದ ಕೆಲಸ ಬಿಟ್ಟು ಬೆಳಗ್ಗೆ ಏಳು ಗಂಟೆಯಿಂದ ಟೋಕನ್‌ಗಾಗಿ ಕಾಯುತ್ತಿದ್ದರೂ ಸಿಕ್ಕಿಲ್ಲ. ಸರತಿಯಲ್ಲಿ ನೂರಾರು ಜನ ನಿಂತುಕೊಂಡಿದ್ದಾರೆ. ಎಲ್ಲರಿಗೂ ಅವಕಾಶ ಸಿಗುತ್ತಿಲ್ಲ. ದಿನಕ್ಕೆ 20 ಮಂದಿಗೆ ಮಾತ್ರ ಟೋಕನ್ ನೀಡುತ್ತಿರುವುದು ಸರಿಯಲ್ಲ. ಹೆಚ್ಚುವರಿ ಕೇಂದ್ರ ತೆರೆದು ಎಲ್ಲರಿಗೂ ಆಧಾರ್ ಮಾಡಿಸಬೇಕು.ಅಬ್ದುಲ್, ಸಿಂಧನೂರು ನಿವಾಸಿ ಸಿಂಧನೂರಿನಲ್ಲಿ ಆಧಾರ್ ನೋಂದಣಿ-ತಿದ್ದುಪಡಿಗೆ ಮೂರು ಕಡೆ ಅವಕಾಶ ಕಲ್ಪಿಸಲಾಗಿದೆ. ಒಂದೊಂದು ಕೇಂದ್ರದಲ್ಲಿ ಇಂತಿಷ್ಟು ಜನರಿಗೆ ಆಧಾರ್ ನೋಂದಣಿಗೆ ಅವಕಾಶ ನೀಡಲಾಗಿದೆ. ಏಕಕಾಲಕ್ಕೆ ಜನರು ಬರುತ್ತಿರುವುದರಿಂದ ಸಮಸ್ಯೆ ಆಗಿರಬಹುದು. ಈ ಬಗ್ಗೆ ಪರಿಶೀಲಿಸಿ, ಅಗತ್ಯ ಬಿದ್ದರೆ ಇನ್ನಷ್ಟು ಕೇಂದ್ರ ಆರಂಭಿಸಲು ಚಿಂತಿಸಲಾಗುವುದು.ಅರುಣ ದೇಸಾಯಿ, ತಹಸೀಲ್ದಾರ್, ಸಿಂಧನೂರು