ಸಿಂಧನೂರು: ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಜೋಳ ಖರೀದಿಗೆ ಸಂಬಂಧಿಸಿದಂತೆ ಇದ್ದ ಗೊಂದಲಗಳನ್ನು ವಿಶೇಷ ಸಭೆಗಳನ್ನು ಮಾಡುವ ಮೂಲಕ ಸರಿಪಡಿಸಲಾಗಿದ್ದು ಖರೀದಿ ಪ್ರಕ್ರಿಯೆ ಚುರುಕುಗೊಳಿಸಿ, ರೈತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕೆಂದು ಶಾಸಕ ಹಂಪನಗೌಡ ಬಾದರ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಸೋಮವಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಾಗೂ ಹಿಂಗಾರು ಜೋಳ ಖರೀದಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಜೋಳ ಖರೀದಿಗೆ ಸಂಬಂಧಿಸಿದಂತೆ ಎದುರಾಗಿದ್ದ ಗೊಂದಲಗಳು ಬಹುತೇಕ ಪರಿಹಾರವಾಗಿವೆ. ರಾಜ್ಯ ಸರ್ಕಾರ ಕಷ್ಟದ ಸಮಯದಲ್ಲೂ ರಾಜ್ಯ ಉಗ್ರಾಣಗಳಿಂದ ಜೋಳ ಖರೀದಿಗೆ ಆದೇಶಿಸಿದೆ. ತಾಲೂಕಿನಲ್ಲಿ ಇನ್ನು 3.70 ಲಕ್ಷ ಕ್ವಿಂಟಾಲ್‌ನಷ್ಟು ಜೋಳ ಖರೀದಿಸಬೇಕಿದ್ದು, ಸ್ವಚ್ಛ ಹಾಗೂ ಗುಣಮಟ್ಟದ ಜೋಳವನ್ನು ಖರೀದಿ ಕೇಂದ್ರಕ್ಕೆ ನೀಡಬೇಕು. ಅಲ್ಪಸ್ವಲ್ಪ ಹುಳುಗಳು ಬಂದರೂ ಅವುಗಳ ನಿವಾರಣೆಗೆ ಫಿಮಿಗೇಷನ್ ಮಾಡಬೇಕು. ಗೋದಾಮುಗಳಲ್ಲಿಯೂ ಮುಂಜಾಗೃತೆವಹಿಸಿ ಜೋಳ ರಕ್ಷಿಸಬೇಕು. ಅಧಿಕಾರಿಗಳು ಇಲ್ಲದ ಗೊಂದಲ ಸೃಷ್ಟಿಸಬಾರದು. ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.
ಜವಳಗೇರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ನಾಡಗೌಡ ಮಾತನಾಡಿ, ಜೋಳ ಪರಿಶೀಲಿಸುವ ಗ್ರೇಡರ್‌ಗಳನ್ನು ಗುಣಮಟ್ಟವನ್ನು ಒಂದು ಕಡೆ ಫೈನಲ್ ಮಾಡಬೇಕು. ಒಂದು ಕಡೆ ಸರಿಯಾಗಿದೆ ಎಂದು ಹೇಳಿ, ಇನ್ನೊಂದು ಕಡೆ ರಿಜೆಕ್ಟ್ ಮಾಡುವುದರಿಂದ ಸಮಸ್ಯೆಯಾಗುತ್ತಿದೆ. ಜೋಳದ ಬೆಳೆ ಒಂದೇ ಹಂಗಾಮಿನಲ್ಲಿ ನೋಂದಣಿಯಾಗುವಂತೆ ಕ್ರಮವಹಿಸಬೇಕು ಎಂದರು.
ಸಭೆಯಲ್ಲಿ ಉಗ್ರಾಣ ನಿಗಮದ ವಿಭಾಗೀಯ ವ್ಯವಸ್ಥಾಪಕ ಜಯತೀರ್ಥ ಮಾತನಾಡಿ, ಜೋಳದ ಗುಣಮಟ್ಟ ಕಾಪಾಡಬೇಕು. ಇಲ್ಲವಾದರೆ ಶೇಖರಣೆಗೆ ಸಮಸ್ಯೆಯಾಗುತ್ತದೆ ಎಂದರು. ಈ ವೇಳೆ ಶಾಸಕ ಹಂಪನಗೌಡರು ಮಾತನಾಡಿ, ಗುಣಮಟ್ಟದ ಜೋಳ ಕೊಡುವುದಕ್ಕೇ ನಾವು ಹೇಳಿದ್ದೇವೆ. ನಿಮ್ಮಲ್ಲಿ ಬರುವ ಜೋಳವನ್ನು ನೀವು ರಕ್ಷಿಸಬೇಕು. ನಿಮ್ಮ ಉಗ್ರಾಣಗಳಲ್ಲಿ ಸಾಕಷ್ಟು ಸಮಸ್ಯೆ ಇದ್ದು, ಎಲ್ಲವೂ ಬಯಲಿಗೆ ಎಳೆದರೆ ನೀವ್ಯಾರು ಕೆಲಸದಲ್ಲಿ ಇರಲ್ಲ ಎಂದು ಎಚ್ಚರಿಸಿದರು.