ಸಿಂಧನೂರು: ಶಾಸಕ ವೆಂಕಟರಾವ ನಾಡಗೌಡ ಭ್ರಷ್ಟಾಚಾರ ಹಾಗೂ ದುರಾಡಳಿತದ ಮೂಲಕ ವ್ಯವಸ್ಥೆಯನ್ನು ಬುಡಮೇಲು ಮಾಡಿದ್ದಾರೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಣ್ಣ ನೀರಾವರಿ ಇಲಾಖೆಯಿಂದ 1 ಕೋಟಿ ರೂ. ವೆಚ್ಚದಲ್ಲಿ ಕುನ್ನಟಗಿ ಗ್ರಾಮದಲ್ಲಿ ನಿರ್ಮಿಸಿದ್ದ ಪಿಕ್‌ಅಪ್ ಕಾಮಗಾರಿ 20 ದಿನದಲ್ಲಿ ಕೊಚ್ಚಿ ಹೋಗಿದೆ. ಗುತ್ತಿಗೆದಾರ ಮಹಾದೇವಪ್ಪರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಈ ಕಾಮಗಾರಿಯ ಉಪ ಗುತ್ತಿಗೆಯನ್ನು ಶಾಸಕರ ಬೆಂಬಲಿಗರು ಪಡೆದಿದ್ದರು. ಕಾಮಗಾರಿ ಕುರಿತು ಜೆಇ ಪ್ರಹ್ಲಾದ್ ಜತೆ ಚರ್ಚಿಸಿದ್ದು, ಕಾಮಗಾರಿಯ ಕಾರ್ಯಾದೇಶ ನೀಡಿರಲಿಲ್ಲ. ಕಾಮಗಾರಿ ಮಾಡಿರುವುದು ಗಮನಕ್ಕಿಲ್ಲ ಎಂದು ತಿಳಿಸಿದ್ದಾರೆ. ಮನಸೋ ಇಚ್ಛೆಯಂತೆ ಕೆಲಸ ಮಾಡಿ ಹಣ ಲೂಟಿ ಮಾಡಲಾಗುತ್ತಿದೆ ಎಂದು ದೂರಿದರು.
ಜೆಜೆಎಂ ಯೋಜನೆಯಡಿ ಗೊರೇಬಾಳ ಗ್ರಾಮದಲ್ಲಿ ನಿರ್ಮಿಸಿದ್ದ ಕೆರೆ ಬಿರುಕು ಬಿಟ್ಟಿದೆ. ಗೊರೇಬಾಳ ಮತ್ತು ದಿದ್ದಿಗಿ ಪಿಕ್‌ಅಪ್ ಕಾಮಗಾರಿ ಕಳಪೆಯಾಗಿದ್ದು, ಸ್ಥಗಿತಗೊಂಡಿದೆ. 75 ಕೋಟಿ ರೂ. ವೆಚ್ಚದ ಸಿಂಧನೂರು-ಪೋತ್ನಾಳ ರಸ್ತೆ ಹದಗೆಟ್ಟು ಗುಂಡಿಗಳು ನಿರ್ಮಾಣವಾಗಿವೆ. ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಕೆಲವು ಕಡೆ ಸುಸ್ಥಿತಿಯಲ್ಲಿದ್ದ ರಸ್ತೆಗಳ ಮೇಲೆ ರಸ್ತೆ ಮಾಡಿ ಬಿಲ್ ಮಾಡಲಾಗಿದೆ. ಗ್ರಾಪಂನ ಬಿಒಸಿ ಬಿಲ್‌ನಲ್ಲಿ ಶೇ.45 ಕಮೀಷನ್ ವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
15 ನಗರ ಸಂಚಾರ ಬಸ್‌ಗಳಲ್ಲಿ 10 ಸಂಚರಿಸುತ್ತಿವೆ. ಇನ್ನುಳಿದ 5 ಬಸ್ ಎಲ್ಲಿವೆ ಎಂಬುದು ತಿಳಿದಿಲ್ಲ. ನಗರಸಭೆಗೆ ಬಂದಿರುವ ಅನುದಾನವನ್ನು ಬೇರೆ ಇಲಾಖೆಗೆ ವಹಿಸಲಾಗುತ್ತಿದೆ. ತಾಯಿ, ಮಕ್ಕಳ ಆಸ್ಪತ್ರೆಗೆ ಕ್ಯೂರಿಂಗ್ ಮಾಡುತ್ತಿಲ್ಲ. ಮಹಿಳಾ ಸ್ನಾತಕೋತ್ತರ ಕೇಂದ್ರಕ್ಕೆ ಹೋಗಲು ರಸ್ತೆಯಿಲ್ಲ. ಕ್ರೀಡಾಂಗಣ ಕಾಮಗಾರಿ ಕಳಪೆಯಾಗಿದೆ. ಕೆಆರ್‌ಡಿಐಎಲ್‌ನ 20 ಕೋಟಿ ರೂ. ಕೆಲಸ ಮಾಡದೆ ಎತ್ತಿಕೊಳ್ಳಲಾಗಿದೆ. ಸಿಂಧನೂರು ನಗರದ ವಿವಿಧ ವಾರ್ಡ್‌ಗಳಲ್ಲಿ ಮನೆಗಳ್ಳತನ ಹೆಚ್ಚಾಗಲು ಪೊಲೀಸ್ ಇಲಾಖೆಯ ವೈಫಲ್ಯ ಕಾರಣ ಎಂದು ಹಂಪನಗೌಡ ನಾದರ್ಲಿ ಆಪಾದಿಸಿದರು. ಜಿಪಂ ಮಾಜಿ ಸದಸ್ಯ ಶಿವನಗೌಡ ಎಲೆಕೂಡ್ಲಿಗಿ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಸದಸ್ಯರಾದ ಶೇಖರಪ್ಪ ಗಿಣಿವಾರ, ಶರಣಪ್ಪ ಉಪ್ಪಲದೊಡ್ಡಿ, ರಾಜು, ಆಲಂಬಾಷಾ, ವೀರೇಶ ಹಟ್ಟಿ, ವೆಂಕೋಬ ಜಿನ್ನದ್, ವೈ.ಅನಿಲಕುಮಾರ, ಪ್ರಮುಖರಾದ ಅಶೋಕ ಭೂಪಾಲ, ಸೈಯದ್ ಜಾಫರ್ ಜಹಗೀರದಾರ್, ಕಲ್ಲೂರು ದೊಡ್ಡನಗೌಡ, ತಿಮ್ಮಯ್ಯ ನಾಯಕ, ಎಂ.ಕಾಳಿಂಗಪ್ಪ ಇದ್ದರು.