ಜಿಲ್ಲೆ

ವಿಶ್ವ ಸಾಹಿತ್ಯ ವೇದಿಕೆಗೆ ಕನ್ನಡ: ಗಜಲ್ ಕವಿ ಸಿದ್ದರಾಮ ಹೊನ್ಕಲ್ ಅನಿಸಿಕೆ

ಸಿಂಧನೂರು: ಅಭೂತಪೂರ್ವ ಸಾಹಿತ್ಯದ ಮೂಲಕ ಕುವೆಂಪು ವಿಶ್ವಮಾನವರಾಗಿದ್ದಾರೆ ಎಂದು ಗಜಲ್ ಕವಿ ಸಿದ್ದರಾಮ ಹೊನ್ಕಲ್ ಹೇಳಿದರು.

ನಗರದ ಅನಿಕೇತನ ಪದವಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ಮನುಜಮತ ಬಳಗ ಆಯೋಜಿಸಿದ್ದ ಕಾಲೇಜಿಗೊಂದು ಕಾವ್ಯ ಓದು, ದತ್ತಿ ಕಾರ್ಯಕ್ರಮ ಹಾಗೂ ರೈಲು ಹಳಿಗಳ ಮೇಲೆ ಕವನ ಸಂಕಲನ ಬಿಡುಗಡೆ ಸಮಾರಂಭ ಉದ್ಘಾಟಿಸಿ ಗುರುವಾರ ಮಾತನಾಡಿದರು. ಕನ್ನಡ ಸಾಹಿತ್ಯವನ್ನು ಸಮೃದ್ಧವಾಗಿಸಿ, ವಿಶ್ವ ಸಾಹಿತ್ಯದ ವೇದಿಕೆಗೆ ತಂದ ಕೀರ್ತಿ ಕುವೆಂಪುಗೆ ಸಲ್ಲುತ್ತದೆ. ಪ್ರಕೃತಿ, ಸೃಷ್ಟಿಯ ಪರಿಕಲ್ಪನೆ ಕುರಿತ ಅವರ ಸಾಹಿತ್ಯ ಜನಸಾಮಾನ್ಯರಿಗೂ ಅರ್ಥವಾಗುತ್ತದೆ ಎಂದು ತಿಳಿಸಿದರು.

ಕಾಲೇಜಿನ ಅಧ್ಯಕ್ಷ ಡಿ.ಎಚ್.ಕಂಬಳಿ ಮಾತನಾಡಿ, ಕುವೆಂಪು ಅವರು ವಿಶ್ವ ಮಾನವ ಸಂದೇಶದ ಮಾರ್ಗದಲ್ಲಿ ನಾವು ನಡೆಯಬೇಕೆಂದರು. ಅಲಿಬಾಬಾ ರೌಡಕುಂದ ಅವರ ರೈಲು ಹಳಿಗಳ ಮೇಲೆ ಕವನ ಸಂಕಲನ ಬಿಡುಗಡೆ ಮಾಡಲಾಯಿತು.