ಸಿಂಧನೂರಿನಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 12ನೇ ರಾಜ್ಯ ಸಮ್ಮೇಳನದ ನಿಮಿತ್ತ ಮೆರವಣಿಗೆ ನಡೆಯಿತು. ರಾಷ್ಟ್ರೀಯ ಅಧ್ಯಕ್ಷೆ ಪಿ.ಕೆ.ಶ್ರೀಮತಿ ಟೀಚರ್, ರಾಜ್ಯ ಘಟಕದ ಅಧ್ಯಕ್ಷೆ ಮೀನಾಕ್ಷಿ ಬಾಳೆ, ಉಪಾಧ್ಯಕ್ಷ ಕೆ.ನೀಲಾ, ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಯು.ವಾಸುಕಿ, ಖಜಾಂಚಿ ಪುಣ್ಯವತಿ ಇತರರಿದ್ದರು. 
ಜಿಲ್ಲೆ

ಬಂಡವಾಳಶಾಹಿಗಳಿಗೆ ಕೇಂದ್ರದ ರಕ್ಷಣೆ

ಶ್ರೀನಾಥ

ಸಿಂಧನೂರು: ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಕೇಂದ್ರ ಸರ್ಕಾರ ಕೋಮುವಾದ ಮತ್ತು ಬಂಡವಾಳಶಾಹಿಗಳ ರಕ್ಷಣೆಗಾಗಿ ಆಡಳಿತ ಮಾಡುತ್ತಿದೆ ಎಂದು ಜನವಾದಿ ಮಹಿಳಾ ಸಂಘಟನೆ ರಾಷ್ಟ್ರೀಯ ಅಧ್ಯಕ್ಷೆ ಪಿ.ಕೆ.ಶ್ರೀಮತಿ ಟೀಚರ್ ಹೇಳಿದರು.

ನಗರದ ಟೌನ್‌ಹಾಲ್‌ನಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ಶನಿವಾರ ಹಮ್ಮಿಕೊಂಡಿದ್ದ 12ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡಿದೆ. ಆದರೆ, ಮಹಿಳೆಯರು ಮಾತ್ರ ದ್ವಿತೀಯ ದರ್ಜೆ ಪ್ರಜೆಗಳಂತೆ ಜೀವಿಸಬೇಕಾಗಿದೆ.

ದೇಶದಲ್ಲಿ ಪ್ರತಿ ಗಂಟೆಗೆ 30 ಮಹಿಳೆಯರು ಅತ್ಯಾಚಾರಕ್ಕೆ ಒಳಗುತ್ತಿದ್ದಾರೆ. ದೌರ್ಜನ್ಯ, ಹಿಂಸೆಗಳು ಸಾಮಾನ್ಯವಾಗಿವೆ. ಎಲ್ಲ ವಿಧದ ದಬ್ಬಾಳಿಕೆಯನ್ನು ವಿರೋಧಿಸಲು ಮಹಿಳೆಯರು ಒಗ್ಗಟ್ಟಾಗಬೇಕಿದೆ. ಮೌಢ್ಯಗಳನ್ನು ಮೀರಿ ಮನುವಾದದ ಕರಿ ನೆರಳಿನಿಂದ ಮಹಿಳೆಯರು ಎಚ್ಚೆತ್ತುಕೊಂಡು ಹೊರ ಬರಬೇಕಾಗಿದೆ ಎಂದರು.

ರಾಜ್ಯ ಘಟಕದ ಅಧ್ಯಕ್ಷೆ ಮೀನಾಕ್ಷಿ ಬಾಳೆ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಕಾರ್ಯದರ್ಶಿ ಯು.ವಾಸುಕಿ, ಖಜಾಂಚಿ ಪುಣ್ಯವತಿ, ಉಪಾಧ್ಯಕ್ಷರಾದ ಕೆ.ಎಸ್.ವಿಮಲಾ, ಕೆ.ನೀಲಾ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷೆ ಶಕುಂತಲಾ ಪಾಟೀಲ್, ಕಾರ್ಯದರ್ಶಿ ವರಲಕ್ಷ್ಮೀ, ಸ್ವಾಗತ ಸಮಿತಿ ಅಧ್ಯಕ್ಷೆ ಸರಸ್ವತಿ ಪಾಟೀಲ್, ಗೌರವಾಧ್ಯಕ್ಷೆ ಶಕುಂತಲಾ ನಾಗರೆಡ್ಡಿ, ಬಸವಂತರಾಯಗೌಡ ಕಲ್ಲೂರು, ಎಸ್.ದೇವೇಂದ್ರಗೌಡ, ಕೆ.ಎಸ್.ಲಕ್ಷ್ಮೀ ಇತರರಿದ್ದರು.

ಇದಕ್ಕೂ ಮುನ್ನ ನಗರದ ಶಾದಿಮಹಲ್‌ನಿಂದ ಆರಂಭವಾದ ಮಹಿಳೆಯರ ಬೃಹತ್ ಮೆರವಣಿಗೆ ಕನಕದಾಸ ವೃತ್ತ, ರಾಯಚೂರು ಗಂಗಾವತಿ ರಸ್ತೆ, ಗಾಂಧಿವೃತ್ತ, ಬಸವ ವೃತ್ತ, ನಟರಾಜ ಕಾಲನಿ ರಸ್ತೆ ಮಾರ್ಗವಾಗಿ ಹಳೇ ಬಜಾರ ಮೂಲಕ ಟೌನ್‌ಹಾಲ್ ತಲುಪಿತು.