ಸಿಂಧನೂರು: ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡದ ಕಾರಣ ಹಿರಿಯ ಶ್ರೇಣಿ ನ್ಯಾಯಾಲಯ ಆದೇಶದನ್ವಯ ಮಂಗಳವಾರ ನಗರದ ಪಿಬ್ಲ್ಯುಡಿಕ್ಯಾಂಪ್‌ನ ನೀರಾವರಿ ಇಲಾಖೆ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲಾಯಿತು.
ಬಳಗಾನೂರು ಹೋಬಳಿ ವ್ಯಾಪ್ತಿಯಲ್ಲಿ ಬರುವ ಶಿರನಗುಡಿ ಪಿಕಪ್ ಕಾಲುವೆಗೆ ನಿರ್ಮಾಣಕ್ಕಾಗಿ 40 ವರ್ಷಗಳ ಹಿಂದೆ ಚನ್ನಯ್ಯ ಶಾಂತಮೂರ್ತಿ ದಿದ್ದಿಗಿ ಅವರ ಸರ್ವೇ ನಂ.40/2ರಲ್ಲಿರುವ 12 ಗುಂಟೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ, ನೀರಾವರಿ ಇಲಾಖೆ 38,529 ರೂ. ನೀಡಿದೆ. ಇನ್ನುಳಿದ ಪರಿಹಾರ ಸುಮಾರು ಒಂದು ಲಕ್ಷ ರೂ. ನೀಡಿಲ್ಲ. ಈ ಹಿನ್ನೆಲೆಯಲ್ಲಿ ಚನ್ನಯ್ಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಹಿರಿಯ ಶ್ರೇಣಿ ನ್ಯಾಯಾಧೀಶ ಲಕ್ಷ್ಮೀಕಾಂತ ಜಾನಕಿರಾಮ್ ಮಿಸ್ಕಿನ್, ನೀರಾವರಿ ಇಲಾಖೆ ವಿರುದ್ಧ ಜಪ್ತಿ ವಾರೆಂಟ್ ಆದೇಶ ಹೊರಡಿಸಿದ್ದಾರೆ. ಅದರಂತೆ ವಕೀಲರಾದ ಎಂ.ಶಶಿಕಾಂತ, ಗಿರೀಶ್ ಈಚನಾಳ, ಕೋರ್ಟ್ ಬೇಲಿಫ್ ಬೂದಿಬಸವ, ಕೋರ್ಟ್ ಸಿಬ್ಬಂದಿ ಸುಮಂಗಲ ಅವರ ಸಮ್ಮುಖದಲ್ಲಿ ಸ್ಥಳೀಯ ನೀರಾವರಿ ಇಲಾಖೆ ಕಚೇರಿಯಲ್ಲಿದ್ದ ಇನ್‌ವೆಂಟರ್, ಟೇಬಲ್, ಚೇರ್‌ಗಳು ಸೇರಿ ಮತ್ತಿತರ ಪೀಠೋಪಕರಣಗಳನ್ನು ಜಪ್ತಿ ಮಾಡಲಾಯಿತು.