ಸಿಂಧನೂರು ನಗರಸಭೆ ಕಚೇರಿಯಲ್ಲಿ ಉಪಾಧ್ಯಕ್ಷೆ ಮಂಜುಳಾ ಪ್ರಭುರಾಜಗೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲೂಕು ಘಟಕ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ವಿರೂಪಾಕ್ಷಿ ಸಾಸಲಮರಿ, ಸದಸ್ಯರಾದ ಮಲ್ಲಿಕಾರ್ಜುನ ಕುನ್ನಟಗಿ, ಸಿದ್ದಪ್ಪ ಸುಲ್ತಾನಪುರ ಇದ್ದರು. 
ಜಿಲ್ಲೆ

ಸ್ವಚ್ಛ ಭಾರತ್ ಅಭಿಯಾನದಡಿ ಸಿಂಧನೂರಿನ ಹಿರೇಹಳ್ಳ ಸ್ವಚ್ಛಗೊಳಿಸಿ

ಸಿಂಧನೂರು: ನಗರದ ಹಿರೇಹಳ್ಳವನ್ನು ಸ್ವಚ್ಛ ಭಾರತ್ ಅಭಿಯಾನದಡಿ ಸ್ವಚ್ಛಗೊಳಿಸುವುದು, ಶುದ್ಧ ಕುಡಿವ ನೀರು ಪೂರೈಕೆ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ಕುಡಿವ ನೀರಿನ ಅರವಟಿಗೆ ಆರಂಭಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲೂಕು ಘಟಕ ಸೋಮವಾರ ನಗರಸಭೆ ಉಪಾಧ್ಯಕ್ಷೆ ಮಂಜುಳಾ ಪ್ರಭುರಾಜಗೆ ಮನವಿ ಸಲ್ಲಿಸಿತು.

ಬೇಸಿಗೆ ಆರಂಭವಾಗಿದ್ದರಿಂದ ಬಿಸಿಲಿನ ತಾಪ ಮತ್ತು ಬಿಸಿಗಾಳಿ ಹೆಚ್ಚಾಗಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ತಾಲೂಕಿನ ವಿವಿಧ ಹಳ್ಳಿಗಳಿಂದ ವಿವಿಧ ಕೆಲಸಗಳಿಗಾಗಿ ನಗರಕ್ಕೆ ನಿತ್ಯ ಬರುತ್ತಿದ್ದು, ಕುಡಿವ ನೀರಿಗಾಗಿ ಪರದಾಡುತ್ತಿದ್ದಾರೆ. ಆದ್ದರಿಂದ ನಗರಸಭೆಯಿಂದಲೇ ಪ್ರಮುಖ ವೃತ್ತಗಳಲ್ಲಿ ಕುಡಿವ ನೀರಿನ ಅರವಟಿಗೆ ಆರಂಭಿಸಿ, ಜನರ ದಾಹ ನೀಗಿಸಬೇಕು. ಈ ಹಿಂದೆ ಹಿರೇಹಳ್ಳದ ನೀರನ್ನೇ ಕುಡಿಯಲು ಉಪಯೋಗಿಸಲಾಗುತ್ತಿತ್ತು. ಆದರೀಗ ಜಾಲಿಗಿಡಗಳು ಬೆಳೆದು ನಿಂತಿವೆ. ಚರಂಡಿ ನೀರು ಹಳ್ಳ ಸೇರುತ್ತಿದೆ. ಸತ್ತ ನಾಯಿ, ಹಂದಿ, ದನ, ಆಕಳುಗಳನ್ನು ತಂದು ಬಿಸಾಡಲಾಗುತ್ತಿದೆ. ಮಲಮೂತ್ರ ವಿಸರ್ಜನೆ ಮಾಡುವ ಸ್ಥಳವಾಗಿ ಮಾರ್ಪಟ್ಟಿದೆ. ಹೀಗಾಗಿ ನಗರಸಭೆ ತ್ವರಿತಗತಿಯಲ್ಲಿ ಬಪ್ಪೂರು ಹಳ್ಳದಿಂದ ಸುಕಾಲಪೇಟೆ ಕೆಳ ಭಾಗದವರೆಗೆ ಇರುವ ಹಿರೇಹಳ್ಳವನ್ನು ಸ್ವಚ್ಛಗೊಳಿಸಬೇಕು.

ವಾರಕ್ಕೊಮ್ಮೆ ವಾರ್ಡ್‌ಗಳಿಗೆ ಕುಡಿವ ನೀರು ಪೂರೈಸಲಾಗುತ್ತಿದೆ. ಬೇಸಿಗೆಯಲ್ಲಿ ನೀರು ಶುದ್ಧೀಕರಣ ಮಾಡಿ ನಾಲ್ಕು ದಿನಕ್ಕೊಮ್ಮೆ ಪೂರೈಸಲು ಕ್ರಮವಹಿಸಬೇಕು. ನಿರ್ಲಕ್ಷ್ಯ ವಹಿಸಿದರೆ ನಗರಸಭೆ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ತಾಲೂಕು ಘಟಕದ ಅಧ್ಯಕ್ಷ ವಿರೂಪಾಕ್ಷಿ ಸಾಸಲಮರಿ, ಸದಸ್ಯರಾದ ಮಲ್ಲಿಕಾರ್ಜುನ ಕುನ್ನಟಗಿ, ಸಿದ್ದಪ್ಪ ಸುಲ್ತಾನಪುರ ಇದ್ದರು.