ಸಿಂಧನೂರು: ಪ್ರಸ್ತುತ ದಿನಗಳಲ್ಲಿ ಎಲ್ಲ ರಂಗಗಳಲ್ಲಿಯೂ ಹೆಜ್ಜೆ ಮುಂದಿಡುವ ಮೂಲಕ ಮಹಿಳೆಯರು ಅಬಲೆ ಅಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷೆ ಜಿ.ಜೆ.ದೇವಿರಮ್ಮ ಹೇಳಿದರು.
ನಗರದಲ್ಲಿರುವ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನಿವಾಸದಲ್ಲಿ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಬ್ಲಾಕ್ ಹಾಗೂ ಮಹಿಳಾ ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಹಿಳೆಯರಿಗೆ ಸಮಾನ ಹಕ್ಕು ದೊರೆತಿರುವುದರಿಂದ ಎಲ್ಲ ರಂಗಗಳಲ್ಲಿಯೂ ಸಾಧನೆ ಮಾಡಲು ಅನುಕೂಲವಾಗಿದೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವಂತೆ ಪ್ರತಿಯೊಬ್ಬ ಮಹಿಳೆಯರ ಸಾಧನೆಗೆ ಪುರುಷರು ಬೆನ್ನೆಲೆಬಾಗಿ ನಿಲ್ಲಬೇಕು. ಅಂದಾಗ ಸ್ತ್ರೀಗೆ ಹೆಚ್ಚಿನ ಶಕ್ತಿ ಬರುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಗ್ರಾಮೀಣ ಬ್ಲಾಕ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರ ಬ್ಲಾಕ್ ಅಧ್ಯಕ್ಷ ಖಾಜಿ ಮಲಿಕ್, ಪ್ರಧಾನ ಕಾರ್ಯದರ್ಶಿ ವೈ.ಅನಿಲಕುಮಾರ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಉಪಾಧ್ಯಕ್ಷ ಮುರ್ತುಜಾ ಹುಸೇನ್, ಮಹಿಳಾ ಘಟಕದ ಗ್ರಾಮೀಣ ಬ್ಲಾಕ್ ಅಧ್ಯಕ್ಷೆ ದಾಕ್ಷಾಯಿಣಿ, ನಗರ ಬ್ಲಾಕ್ ಅಧ್ಯಕ್ಷೆ ನಾಗರತ್ನಮ್ಮ ಬಂಗಾರಶೆಟ್ಟರ್, ಮುಖಂಡ ಛತ್ರಪ್ಪ ಕುರಕುಂದಿ ಇದ್ದರು.