ಸಿಂಧನೂರು ಸೋಷಿಯಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಪೋಸ್ಟರ್ ಪ್ರದರ್ಶನ ಮಾಡಿದರು. 
ಜಿಲ್ಲೆ

ಈದ್-ಉಲ್-ಫಿತ್ರ್ ಸಂಭ್ರಮ - ಸಿಂಧನೂರಿನಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರಾರ್ಥನೆ

ಸಿಂಧನೂರು: ನಗರದ ಈದ್ಗಾ ಮೈದಾನದಲ್ಲಿ ಈದ್-ಉಲ್-ಫಿತ್ರ್ ಪ್ರಯುಕ್ತ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಶ್ರದ್ಧಾ ಭಕ್ತಿಯಿಂದ ಹಬ್ಬ ಆಚರಿಸಿದರು.

ಒಂದು ತಿಂಗಳ ಕಾಲ ಉಪವಾಸ ಆಚರಿಸಿದ ಮುಸ್ಲಿಂ ಸಮಾಜದವರು, ಸೋಮವಾರ ಬೆಳಗ್ಗೆ 9 ಗಂಟೆಗೆ ನಡೆದ ಈದ್ ಆಚರಣೆಯ ಸಾಮೂಹಿಕ ಪ್ರಾರ್ಥನೆಯಲ್ಲಿ ನಮಾಜ್ ಮಾಡಿ, ಉಪವಾಸ ವೃತಕ್ಕೆ ತೆರೆ ಎಳೆದರು. ಮೌಲ್ವಿಗಳು ಕುರಾನ್ ಪಠಣ ಮಾಡಿದರು. ಸಾಮೂಹಿಕ ಪ್ರಾರ್ಥನೆ ನಂತರ ಪರಸ್ಪರ ಶುಭಾಶಯ ಕೋರಿದರು. ಈ ವೇಳೆ ಹೊಸ ಬಟ್ಟೆಗಳಲ್ಲಿ, ಸಾಂಪ್ರದಾಯಿಕ ಪೋಷಾಕುಗಳಲ್ಲಿ ಕಂಗೊಳಿಸುತ್ತಿದ್ದ ಮಕ್ಕಳು ಹಬ್ಬದ ಸಂಭ್ರಮ ಹೆಚ್ಚಿಸಿದರು.

ಹಬ್ಬದ ನಿಮಿತ್ತ ಎಲ್ಲ ಮಸೀದಿಗಳಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಹಬ್ಬ ಆಚರಣೆ ಹಿನ್ನೆಲೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಬಿ.ಎಸ್.ತಳವಾರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು

ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ಸೋಮನಗೌಡ ಬಾದರ್ಲಿ, ಮುಖಂಡರಾದ ಶಿವನಗೌಡ ಗೊರೇಬಾಳ, ಪ್ರಭುರಾಜ್, ಛತ್ರಪ್ಪ, ಶಿವಕುಮಾರ ಜವಳಿ, ಶಿವರಾಜ ಪಾಟೀಲ್ ಗುಂಜಳ್ಳಿ, ವೆಂಕಟೇಶ ನಾಯಕ, ವೀರೇಶ ರಾರಾವಿ ಶುಭಾಶಯ ತಿಳಿಸಿದರು. ಈದ್ಗಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೈಯದ್ ಹಾರೂನ್ ಜಾಹಗೀರದಾರ್, ಮುಖಂಡರಾದ ಸೈಯದ್ ಬಾಬರ್ ಪಾಷಾ ವಕೀಲ, ಕೆ.ಜಿಲಾನಿ ಪಾಷಾ, ಎಂ.ಡಿ.ನದೀಮುಲ್ಲಾ, ಜಾಫರ್ ಅಲಿ ಜಾಹಗೀರದಾರ್, ಸೈಯದ್ ಆಬೀದ್ ಖಾದ್ರಿ, ಖಾಜಿಮಲಿಕ್ ವಕೀಲ, ಮುಹಮ್ಮದ್ ಮುಸ್ತಫಾ ಜುವೆರ್ಸ್‌, ಬಾಬರ್‌ಪಟೇಲ್, ಹಾಜಿಮಸ್ತಾನ್, ಸಲ್ಮಾನ್ ಜಾಹಗೀರದಾರ್ ಇತರರಿದ್ದರು.

ವಕ್ಫ್ ತಿದ್ದುಪಡಿಗೆ ವಿರೋಧ: ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಸಾಮೂಹಿಕ ಪ್ರಾರ್ಥನೆ ನಡೆಸಿದ ಮುಸ್ಲಿಮರು ಕೇಂದ್ರ ಸರ್ಕಾರದ ಅಸಂವಿಧಾನಿಕ ಮತ್ತು ಮೂಲಭೂತ ಹಕ್ಕುಗಳಿಗೆ ವಿರುದ್ಧವಾದ ವಕ್ಫ್ ಮಸೂದೆ-2024 ಹಿಂಪಡೆಯಬೇಕೆಂದು ಒತ್ತಾಯಿಸಿದರು. ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಐಇ ಸಿಂಧನೂರು ಘಟಕದಿಂದ ಸಹಿ ಸಂಗ್ರಹ ಚಳವಳಿ ನಡೆಸಲಾಯಿತು. ನೂರಾರು ಜನರು ಸಹಿ ಮಾಡಿದರು. ಎಸ್‌ಐಒ ಸಿಂಧನೂರು ಘಟಕದ ಅಧ್ಯಕ ಇಮ್ತಿಯಾಜ್ ಹಾಗೂ ನೂರ್ ಮುಹಮ್ಮದ್ ನೇತೃತ್ವ ವಹಿಸಿದ್ದರು. ಸ್ಥಳೀಯ ಎಸ್ಡಿಪಿಐ ಕಾರ್ಯಕರ್ತರು ಸಹಿತ ಈದ್ಗಾ ಮೈದಾನದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಪೋಸ್ಟರ್ ಪ್ರದರ್ಶಿಸಿದರು.