ಸಿಂಧನೂರು: ಸಾರ್ವಜನಿಕರ ಆಸ್ತಿಗಳನ್ನು ಖಾಸಗೀಕರಣಗೊಳಿಸುವ ಬಿಜೆಪಿ ಸರ್ಕಾರ, ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ರಾಜ್ಯ ಗ್ರಾಪಂ ನೌಕರರ ಸಂಘದ ರಾಜ್ಯ ಸಂಚಾಲಕ ಆರ್.ಎಸ್.ಬಸವರಾಜ ಹೇಳಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಶುಕ್ರವಾರ ರಾಜ್ಯ ಗ್ರಾಪಂ ನೌಕರರ ವಿಭಾಗೀಯ ಮಟ್ಟದ ವಿಸ್ತತ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ರೈತರು, ಕಾರ್ಮಿಕರು, ವಿದ್ಯಾರ್ಥಿ, ಯುವಕರು, ಮಹಿಳೆಯರ ವಿರೋಧಿಯಾಗಿ ಆಡಳಿತ ನಡೆಸುತ್ತಿದೆ. ಸಾರ್ವಜನಿಕ ಆಸ್ತಿಗಳನ್ನು ಖಾಸಗೀಕರಣ ಮಾಡಿ ಮಾರಾಟ ಮಾಡುತ್ತಿದೆ. ಅದರಂತೆ ಗ್ರಾಪಂ ನೌಕರರನ್ನು ಖಾಸಗೀಕರಣ ಮಾಡುವ ಸಂಚು ರೂಪಿಸಿದೆ. ಅನೇಕ ವರ್ಷಗಳಿಂದ ಸೇವೆ ಕಾಯಂ, ಕನಿಷ್ಠ ವೇತನ, ಪಿಂಚಣಿ ಸೌಲಭ್ಯ ನೀಡುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಾ ಬಂದಿದ್ದರೂ ಸ್ಪಂದಿಸುತ್ತಿಲ್ಲ. ಈ ಸರ್ಕಾರಕ್ಕೆ ಪಂಚಾಯಿತಿ ನೌಕರರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಆದ್ದರಿಂದ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ತಿಳಿಸಿದರು.
ರಾಜ್ಯ ಉಪಾಧ್ಯಕ್ಷ ಎಂ.ವಿ.ನಾಡಗೌಡ, ಜಿಲ್ಲಾಧ್ಯಕ್ಷ ಅಶೋಕ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಶೇಕ್ಷಾಖಾದ್ರಿ, ಸಮುದಾಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಗ್ರಾಪಂ ನೌಕರರ ಸಂಘದ ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ರಾಜು, ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನಸ್ವಾಮಿ, ರಾಯಚೂರು ಜಿಲ್ಲಾ ಖಜಾಂಚಿ ವೀರೇಶಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌನೇಶ ಜಿ., ಅಶೋಕ ದೇವಸುಗೂರು, ಹನುಮಂತಪ್ಪ ಬನ್ನಿಗೋಳ್, ಆಂಜನೇಯ ಗೋರಕಲ್, ರಾಮುಲು ಸಿಂಧನೂರು, ನಾಗಭೂಷಣ ರಡ್ಡಿ, ಎಲ್ಲ ತಾಲೂಕಾಧ್ಯಕ್ಷರು ಭಾಗವಹಿಸಿದ್ದರು. ಪವಿತ್ರಾ ನಿರೂಪಿಸಿದರು.