ಸಿಂಧನೂರು: ದಲಿತ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿರುವ ಬಸವನಗೌಡ ಯತ್ನಾಳ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ಒತ್ತಾಯಿಸಿ ಸಿಪಿಐ(ಎಂಎಲ್) ಲಿಬರೇಷನ್ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟ ನಗರದ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಉಪತಹಸೀಲ್ದಾರ್ ಚಂದ್ರಶೇಖರಗೆ ಮನವಿ ಸಲ್ಲಿಸಿದವು.
ಹೂ ಹಾಕಲು ಸನಾತನಿಗಳೇ ಆಗಬೇಕು. ಸಾಮಾನ್ಯ ದಲಿತ ಮಹಿಳೆಗೂ ಅವಕಾಶ ಇಲ್ಲ ಎಂದು ಹೇಳುವ ಮೂಲಕ ಸಮುದಾಯವನ್ನು ಅವಮಾನಿಸಿ ಜಾತಿ ನಿಂದನೆ ಮಾಡಿದ್ದಾರೆ. ಚುನಾಯಿತ ಪ್ರತಿನಿಧಿಯಾಗಿ ಹೀಗೆ ವರ್ತಿಸಿರುವುದು ಖಂಡನಾರ್ಹ, ಶಿಕ್ಷಾರ್ಹ ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಂಡ ಕಂಡಲ್ಲಿ ಜಾತಿ-ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ ದ್ವೇಷ ಹರಡಿಸುವುದನ್ನೇ ಕೆಲಸ ಮಾಡಿಕೊಂಡಿರುವ ಬಸನಗೌಡ ಯತ್ನಾಳ ಕಳೆದ ಎರಡ್ಮೂರು ತಿಂಗಳಲ್ಲಿ ಹತ್ತಾರು ಕಡೆ ದ್ವೇಷ ಭಾಷಣ ಮಾಡಿ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕದಡಿದ್ದಾರೆ. ದಲಿತ ಮಹಿಳೆಯರ ಬಗ್ಗೆ ಜಾತಿ ನಿಂದನೆ ಮಾಡಿದ ಯತ್ನಾಳ ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ದಲಿತ ಮಹಿಳೆಯರಿಗೆ ಯತ್ನಾಳರಿಂದ ಅವಹೇಳನ
ಸಿಪಿಐ(ಎಂಎಲ್) ಲಿಬರೇಷನ್‌ನ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಪೂಜಾರ್, ಪಕ್ಷದ ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ರಾಜ್ಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿರುಪಮ್ಮ ಉದ್ಬಾಳ ಜೆ., ಡಿಎಸ್‌ಎಸ್ ಸಂಚಾಲಕ ಮಂಜುನಾಥ ಗಾಂಧಿನಗರ, ಪ್ರಮುಖರಾದ ಆರ್.ಎಚ್.ಕಲಮಂಗಿ, ಯಮನೂರಪ್ಪ, ಹುಸೇನಪ್ಪ ಅರಳಹಳ್ಳಿ, ಬಸವರಾಜ, ದೇವಪ್ಪ ಅರಳಹಳ್ಳಿ, ರಮೇಶ ಅರಳಹಳ್ಳಿ, ಇಂದ್ರಮ್ಮ, ಶಾಂಭವಿ ಇದ್ದರು.