ಸಿಂಧನೂರು: ಗುಂಡಾ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೀಡಲಾಗಿದ್ದ ಜೋಳದ ಖರೀದಿ ಕೇಂದ್ರವನ್ನು ಏಕಾಏಕಿ ರದ್ದುಪಡಿಸಲು ಶಾಸಕ ಆರ್.ಬಸನಗೌಡ ತುರ್ವಿಹಾಳ ಪತ್ರ ಬರೆದಿರುವುದು ಆಶ್ಚರ್ಯಕ್ಕೆ ಕಾರಣವಾಗಿದ್ದು ಈಗ ಗ್ರದಟಗಿ ವಿಧೋದ್ದೇಶ ಪ್ರಾಥಮಿಕ ಸಹಕಾರ ಸಂಘಕ್ಕೆ ಖರೀದಿ ಕೇಂದ್ರವನ್ನು ಟ್ಯಾಗ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಮುಂಗಾರು ಋತುವಿನಲ್ಲಿ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ಜೋಳವನ್ನು ಖರೀದಿ ಮಾಡಲು ಹೆಚ್ಚುವರಿಯಾಗಿ 7 ಖರೀದಿ ಕೇಂದ್ರಗಳಿಗೆ ಮಂಜೂರಾತಿ ನೀಡಲಾಗಿತ್ತು. ಅದರಲ್ಲಿ ಗುಂಡಾ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಖರೀದಿ ಕೇಂದ್ರ ನೀಡಲಾಗಿತ್ತು. ಇನ್ನೇನು ನೋಂದಣಿ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಶಾಸಕ ಆರ್.ಬಸನಗೌಡ ತುರ್ವಿಹಾಳ ರದ್ದುಪಡಿಸುವಂತೆ ಏಕಾಏಕಿ ಜಿಲ್ಲಾಧಿಕಾರಿಗೆ ಜ.2 ರಂದು ಪತ್ರ ಬರೆದು, ಸಹಕಾರಿ ಮೇಲೆ ಕೆಲ ಅಪಾದನೆಗಳು ಹಾಗೂ ಜೋಳ ಖರೀದಿ ಅವ್ಯವಹಾರವನ್ನು ಕಾರಣ ನೀಡಿದ್ದಾರೆ.
ಈ ಪತ್ರ ಅನುಸರಿಸಿ ಜ.3 ರಂದು ಜೋಳ ಖರೀದಿ ಕೇಂದ್ರ ರದ್ದುಪಡಿಸಿ ಆದೇಶಿಸಿದ್ದಾರೆ. ಇಲ್ಲಿಯವರೆಗೆ ಸಹಕಾರಿಯ ಮೇಲೆ ಯಾವುದೇ ದೂರುಗಳು ದಾಖಲಾಗಿಲ್ಲ. ಏಕಾಏಕಿ ಶಾಸಕರು ಈ ನಿರ್ಧಾರಕ್ಕೆ ಮುಂದಾಗಿರುವುದು ಆಶ್ಚರ್ಯ ಮೂಡಿಸಿದೆ. ಈ ವಿಷಯವಾಗಿ ರಾಜಕೀಯ ಮೇಲಾಟವೇನಾದರೂ ನಡೆದಿದೆಯಾ ಎಂದು ಚರ್ಚೆ ನಡೆಯುತ್ತಿದೆ. ಶಾಸಕರ ಈ ನಿರ್ಧಾರದಿಂದ ರೈತರು ಅಸಮಧಾನ ಹೊರ ಹಾಕುತ್ತಿದ್ದಾರೆ. ಸಹಕಾರಿಯ ವಿರುದ್ಧ ದೂರುಗಳಿದ್ದರೆ ತನಿಖೆ ನಡೆಸಬೇಕಿತ್ತು. ಆದರೆ, ರೈತರಿಗೆ ಅನುಕೂಲ ವಾಗಬೇಕಿದ್ದ ಖರೀದಿ ಕೇಂದ್ರವನ್ನು ರದ್ದುಪಡಿಸಿರುವುದು ಸರಿಯಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶಾಸಕರು ಇನ್ನೊಮ್ಮೆ ಪಾರಮಾರ್ಶಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.