ಬುಕ್ಕನಹಟ್ಟಿ ಗ್ರಾಮದಲ್ಲಿ ಭಾನುವಾರ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮವನ್ನು ಅರಳಳ್ಳಿ ಬೃಹ್ಮಠದ ಅಭಿನವ ಶರಣಬಸವಾರ್ಯರು ಉದ್ಘಾಟಿಸಿದರು.  
ಜಿಲ್ಲೆ

ಸ್ಮರ್ಧಾತ್ಮಕ ಯುಗ ಎದುರಿಸಲು ಸನ್ನದ್ಧರಾಗಿ

ಸಿಂಧನೂರು: ಸ್ಪರ್ಧಾತ್ಮಕ ಯುಗ ಎದುರಿಸಲು ಸನ್ನದ್ಧರಾಗಿ, ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕೆಂದು ತಹಸೀಲ್ದಾರ್ ಅರುಣ ದೇಸಾಯಿ ಹೇಳಿದರು.

ಬುಕ್ಕನಹಟ್ಟಿ ಗ್ರಾಮದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದು ಸ್ಪರ್ಧೆ ಇಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಿರಂತರ ಅಧ್ಯಯನ ಇದ್ದರೆ ಎಲ್ಲವೂ ಸಾಧ್ಯವಾಗಲಿದೆ. ಕಾಟಾಚಾರದ ಓದು ಬೇಡ. ಒಳ್ಳೆಯ ಸ್ಪರ್ಧಾತ್ಮಕ ಪುಸ್ತಕಗಳನ್ನು ಓದಬೇಕು ಎಂದರು.

ಕೇಸೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಮೀನ್ ಅಲಂದಾರ್ ಮಾತನಾಡಿದರು. ಅರಳಳ್ಳಿ ಬೃಹ್ಮಠದ ಅಭಿನವ ಶರಣಬಸವಾರ್ಯ ಆಶೀರ್ವಚನ ನೀಡಿ, ವಿದ್ಯಾರ್ಥಿಗಳಲ್ಲಿ ಜ್ಞಾನದ ಜತೆಗೆ ಸಂಸ್ಕಾರ ಬೆಳೆಸುವ ಕೆಲಸವಾಗಬೇಕು ಎಂದರು. ಶಿಕ್ಷಕ ಬಸವರಾಜ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಶಿಕ್ಷಕ ಶರಣಪ್ಪ ಇತರರಿದ್ದರು. ಶಿಕ್ಷಕ ಮಂಜುನಾಥ ಸ್ವಾಗತಿಸಿದರು. ಶಿಕ್ಷಕ ಶಿವರಾಜ ನಿರೂಪಿಸಿದರು. ಉಪನ್ಯಾಸಕ ವೆಂಕಟೇಶ ವಂದಿಸಿದರು.