ಸಿಂಧನೂರಿನ ನ್ಯಾಷನಲ್ ಪದವಿ ಕಾಲೇಜಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಮಾಜಿ ಸಚಿವ ಹಾಗೂ ಕೆಒಎಫ್ ಅಧ್ಯಕ್ಷ ವೆಂಕಟರಾವ ನಾಡಗೌಡ ಉದ್ಘಾಟಿಸಿದರು. ಕಸಾಪ ತಾಲೂಕಾಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ಅಕ್ಕಮಹಾದೇವಿ ಮಹಿಳಾ ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಆರ್.ಸಿ.ಪಾಟೀಲ್, ವಿ.ಸಿ.ಬಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಚಂದ್ರಶೇಖರ ಬೆನ್ನೂರು, ಕಾರ್ಯದರ್ಶಿ ಎಸ್.ರವಿಕುಮಾರ ಮಸ್ಕಿ ಇದ್ದರು. 
ಜಿಲ್ಲೆ

ರಾಸಾಯನಿಕ ಬಳಕೆಯಿಂದ ಭೂಮಿ ಬಂಜರು; ಮಾಜಿ ಸಚಿವ ವೆಂಕಟರಾವ ನಾಡಗೌಡ ಕಳವಳ

ಸಿಂಧನೂರು: ಏಕ ಬೆಳೆ ಪದ್ಧತಿ, ವಿಪರೀತ ಗೊಬ್ಬರ-ಕ್ರಿಮಿನಾಶಕ ಬಳಕೆಯಿಂದ ಭೂಮಿಯ ಫಲವತ್ತತೆ ನಾಶವಾಗುತ್ತಿದ್ದು, ರೈತರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಬಂಜರು ಭೂಮಿ ಉಳಿಯುತ್ತದೆ ಎಂದು ಮಾಜಿ ಸಚಿವ ಹಾಗೂ ಕೆಒಎಫ್ ಅಧ್ಯಕ್ಷ ವೆಂಕಟರಾವ ನಾಡಗೌಡ ಕಳವಳ ವ್ಯಕ್ತಪಡಿಸಿದರು.

ನಗರದ ನ್ಯಾಷನಲ್ ಪದವಿ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಹಿಂದೆ ಒಂದೇ ಬೆಳೆಗೆ ಸೀಮಿತವಾಗದೆ ಬೇರೆ ಬೇರೆ ಬೆಳೆಯುತ್ತಿದ್ದರಿಂದ ಭೂಮಿ ಫಲವತ್ತಾಗಿತ್ತು. ಆದರೆ ಈ ಭಾಗದಲ್ಲಿ ಭತ್ತ ಬಿಟ್ಟರೆ ಬೇರೆ ಬೆಳೆ ಬೆಳೆಯುತ್ತಿಲ್ಲ ಎಂದರು.

ರೈತರು ಕೃಷಿಯಷ್ಟೇ ಅಲ್ಲದೆ ಉಪಕಸುಬುಗಳ ಕಡೆಗೂ ಗಮನಹರಿಸಬೇಕು. ಇದು ಆರ್ಥಿಕ ಸಂಕಷ್ಟದಿಂದ ಪಾರುಮಾಡುತ್ತದೆ. ಯುವ ಸಮೂಹ ಕೃಷಿಯಿಂದ ವಿಮುಖಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಕೃಷಿ ಬಿಟ್ಟರೆ ಮುಂದಿನ ದಿನಗಳಲ್ಲಿ ಬೇರೆ ಆಯ್ಕೆಯಿಲ್ಲ ಎನ್ನುವುದನ್ನು ಎಲ್ಲರೂ ಅರಿಯಬೇಕು. ಈಗಾಗಲೇ ಲಕ್ಷಗಟ್ಟಲೆ ಸಂಬಳ ಪಡೆಯುವ ಇಂಜಿನಿಯರ್‌ಗಳು ಕೃಷಿಯ ಕಡೆಗೆ ವಾಲಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಜ್ಞಾನದ ಜತೆ ಕೃಷಿಯಲ್ಲೂ ಸಾಧನೆ ಮಾಡಬಹುದು ಎಂಬುದನ್ನು ಅರಿಯಬೇಕು ಎಂದು ವೆಂಕಟರಾವ ನಾಡಗೌಡ ತಿಳಿಸಿದರು.

ರೈತ ಎನ್.ಶರಣೇಗೌಡ ಗೊರೇಬಾಳ ಮಾತನಾಡಿ, ಸಾವಯವ ಕೃಷಿಯಿಂದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಪ್ರಾಚಾರ್ಯ ಎಚ್.ರಾಮಲಿಂಗಯ್ಯ, ಉಪನ್ಯಾಸಕ ವಿಜಯಕುಮಾರ ನಾಡಗೌಡ, ಪತ್ರಕರ್ತರಾದ ಶರಣಪ್ಪ ಬೇರ‌್ಗಿ, ಪ್ರಹ್ಲಾದಗುಡಿ, ಬಸವಕೇಂದ್ರದ ಪಿ.ರುದ್ರಪ್ಪ ಕುರಕುಂದಿ ಇತರರಿದ್ದರು.