ಸಿಂಧನೂರು ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುಸ್ಥಿತಿಯಲ್ಲಿರುವುದು. 
ಜಿಲ್ಲೆ

ರೈಲ್ವೆ ಸ್ಟೇಷನ್ ರಸ್ತೆ ಅಭಿವೃದ್ಧಿಗೆ ಗ್ರಹಣ!

ಸಿಂಧನೂರಿನಲ್ಲಿ ಕಾಮಗಾರಿ ನನೆಗುದಿಗೆ 9 ಕೋಟಿ ರೂ. ಮಂಜೂರು

ಅಶೋಕ ಬೆನ್ನೂರು

ಸಿಂಧನೂರು: ನಗರದ ಗಂಗಾವತಿ ರಸ್ತೆಯಿಂದ ರೈಲ್ವೆ ಸ್ಟೇಷನ್‌ಗೆ ತೆರಳುವ ರಸ್ತೆ ಹಾಳಾಗಿದೆ. ಸರ್ಕಾರಿ ಬಸ್, ಕಾರು, ಆಟೊ ಮತ್ತಿತರ ವಾಹನಗಳು ಸಂಕಷ್ಟದಲ್ಲಿ ಸಂಚಾರ ಮಾಡುವಂತಾಗಿದೆ. ರಸ್ತೆ ಕಾಮಗಾರಿ ಆರಂಭಿಸಲು ಮೀನ-ಮೇಷ ಎಣಿಸಲಾಗುತ್ತಿದೆ.

ಈಗಾಗಲೇ ರೈಲು ಸಂಚಾರ ಆರಂಭವಾಗುವ ಮೂಲಕ ಮೂರು ದಶಕಗಳ ಕನಸು ನನಸಾಗಿದೆ. ಆದರೆ, ನಗರದಿಂದ ಒಂದುವರೆ ಕಿ.ಮೀ ದೂರದಲ್ಲಿರುವ ರೈಲ್ವೆ ಸ್ಟೇಷನ್ ತೆರಳುವ ರಸ್ತೆ ಕಿರಿದಾಗಿದೆ. ಅಲ್ಲದೆ ತೆಗ್ಗುದಿನ್ನೆಗಳಿಂದ ಕೂಡಿದೆ. ರೈತರು ಎತ್ತಿನ ಬಂಡಿ, ಟ್ರಾೃಕ್ಟರ್ ಮೂಲಕ ಹೊಲಗಳಿಗೆ ಹೋಗಲು ಈ ರಸ್ತೆ ಆಧಾರವಾಗಿದೆ. ಕಪ್ಪು ಮಣ್ಣಿನ ರಸ್ತೆ ಇದಾಗಿದೆ. ಮಳೆ ಬಂದರೆ ಸಾಕು ಕೆಸರು ಗದ್ದೆಯಂತಾಗುತ್ತದೆ. ಸತತ ಮಳೆಯಿಂದ ಈಗ ರಸ್ತೆ ಸ್ಥಿತಿ ಹೇಳಿದರೂ ತೀರದು. ರಸ್ತೆಯಲ್ಲಿ ಬಿದ್ದಿರುವ ಆಳೆತ್ತರ ತೆಗ್ಗುಗಳಲ್ಲಿ ಓಡಾಡುವುದಕ್ಕೆ ಎದೆಗುಂಡಿಗೆ ಬೇಕೆಂಬ ಸ್ಥಿತಿ ನಿರ್ಮಾಣವಾಗಿದೆ. ಹದಗೆಟ್ಟ ರಸ್ತೆಯಲ್ಲಿ ಹೋಗಲು ಆತಂಕ ಪಡುವ ಸಾರ್ವಜನಿಕರು ಹುಬ್ಬಳ್ಳಿ ಮತ್ತು ಬೆಂಗಳೂರಿಗೆ ತೆರಳುವರು ಈ ರಸ್ತೆಯಲ್ಲಿ ಓಡಾಡುವುದಕ್ಕಿಂತ ಬಸ್‌ಗಳಲ್ಲಿ ಪ್ರಯಾಣಿಸುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಬರುವುದೊಂದೆ ಬಾಕಿ ಇದೆ.

ರೈಲು ಬಂದರೂ ಸೌಲಭ್ಯವಿಲ್ಲ

26 ವರ್ಷಗಳ ನಂತರ ರೈಲು ಸಂಚಾರ ಕಂಡ ಸಿಂಧನೂರು ತಾಲೂಕಿನ ಜನ ಖುಷಿಪಟ್ಟಿದ್ದರು. ಎರಡೂವರೆ ದಶಕಗಳ ನಂತರ ರೈಲೇನು ಬಂತು. ಆದರೆ, ಈ ನಿಲ್ದಾಣಕ್ಕೆ ತಲುಪುವ ಸಂಪರ್ಕ ರಸ್ತೆ ಇದುವರೆಗೂ ನಿರ್ಮಾಣ ಆಗದೇ ಇರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಜನರು ಅಧ್ವಾನ ರಸ್ತೆಯಲ್ಲಿ ಎದ್ದು ಬಿದ್ದು ಸಂಚರಿಸುವಂತಾಗಿದೆ. ಉದ್ಘಾಟನೆಗೆ ಬಂದವರೂ ಸಹ ಇದೇ ತಗ್ಗು-ದಿನ್ನೆಯ ರಸ್ತೆಯಲ್ಲೇ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ಹೋದರು. ಆದರೆ, ದಿನವೂ ಇದೇ ರಸ್ತೆಯಲ್ಲಿ ಓಡಾಡುವುದೇ ಹೇಗೆ ಎಂಬುದು ಸಾರ್ವಜನಿಕರ ಅಳಲಾಗಿದೆ.

ಕೆಸರು ಗದ್ದೆಯಾದ ರೋಡ್

ನಗರದ ಗಂಗಾವತಿ ರಸ್ತೆಯಿಂದ ರೈಲ್ವೆ ಸ್ಟೇಷನ್‌ವರೆಗೆ ರಸ್ತೆಯನ್ನು ಅಗಲೀಕರಣಗೊಳಿಸಿ, ಸಿಸಿ ರಸ್ತೆ ನಿರ್ಮಿಸಲು ನೀರಾವರಿ ಇಲಾಖೆಯಿಂದ 9 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೂ ರಸ್ತೆ ಕಾಮಗಾರಿ ಆರಂಭಿಸುತ್ತಿಲ್ಲ. ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆ ಸಂಪೂರ್ಣ ಕಚ್ಚಾ ರಸ್ತೆಯಾಗಿದೆ. ಎಲ್ಲೆಂದರಲ್ಲಿ ತಗ್ಗು-ದಿನ್ನೆಗಳು ಬಿದ್ದಿವೆ. ಅಕ್ಕಪಕ್ಕದಲ್ಲಿ ರೈತರ ಹೊಲಗಳಿದ್ದು, ಬಸಿ ನೀರಿನಿಂದಾಗಿ ಅಲ್ಲಲ್ಲಿ ಕಡಿದಾದ ಪ್ರದೇಶ ನಿರ್ಮಾಣವಾಗಿದೆ. ಆಯ ತಪ್ಪಿದರೆ ಅಪಘಾತ ಗ್ಯಾರಂಟಿ. ಇನ್ನು ಆಟೊ, ದ್ವಿಚಕ್ರ ವಾಹನ ಚಲಾಯಿಸಲು ಹರಸಾಹಸ ಮಾಡಬೇಕಿದೆ. ಆಟೋ ಚಾಲಕರು ಸಂಚರಿಸಲು ಭಯಪಡುವಂತಾಗಿದೆ.

ಗಂಗಾವತಿ ಮುಖ್ಯ ರಸ್ತೆಯಿಂದ ರೈಲ್ವೆ ನಿಲ್ದಾಣಕ್ಕೆ ಅಂದಾಜ 1 ಕಿ.ಮೀ ಅಂತರ ಇದೆ. ಈ ಮಾರ್ಗದಲ್ಲಿ ರಸ್ತೆ ಸಂಪೂರ್ಣ ಹದೆಗಟ್ಟಿದೆ. ಎಲ್ಲೆಂದರಲ್ಲಿ ತಗ್ಗು ದಿನ್ನೆಗಳು ಬಿದ್ದಿವೆ. ಮಳೆಗಾಲವಾಗಿರುವುದರಿಂದ ರಸ್ತೆ ಕೆಸರು ಗದ್ದೆಯಾಗಿದೆ. ಸಂಚಾರ ಪ್ರಯಾಸದಾಯಕವಾಗಿದೆ. ಸಂಪರ್ಕ ರಸ್ತೆ ನಿರ್ಮಾಣದ ಬಗ್ಗೆ ಕಾಳಜಿ ವಹಿಸಬೇಕಾಗಿದೆ.| ವಿಜ್ಜಪ್ಪ ವಕೀಲ ನಿವಾಸಿ, ಸಿಂಧನೂರು ಸಿಂಧನೂರಿನ ರೈಲ್ವೆ ನಿಲ್ದಾಣ ರಸ್ತೆ ನಿರ್ಮಾಣಕ್ಕೆ 9 ಕೋಟಿ ರೂ. ಮಂಜೂರಾಗಿದೆ. ರಸ್ತೆ ಕಾಮಗಾರಿ ಆರಂಭಿಸಲು ತಡವಾಗಿದೆ. ಈಗಾಗಲೇ ಈ ಬಗ್ಗೆ ಕ್ರಮಕೈಗೊಂಡಿದ್ದು, ರಸ್ತೆಯಲ್ಲಿ ಬರುವ ವಿದ್ಯುತ್ ಪೋಲ್ ಸ್ಥಳಾಂತರಿಸಿ, ರಸ್ತೆ ಕಾಮಗಾರಿ ಆರಂಭಿಸಲಾಗುವುದು. ಆದಷ್ಟು ಬೇಗ ಕಾಮಗಾರಿ ಆರಂಭವಾಗಲಿದೆ. ವಿಳಂಬ ಮಾಡುವುದಿಲ್ಲ.| ಸತ್ಯನಾರಾಯಣ ಶ್ರೇಷ್ಠಿ ಇಇ, ನೀರಾವರಿ ಇಲಾಖೆ, ಸಿಂಧನೂರು.