ಅಖಿಲ ಭಾರತ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಸಾಯಿ ಬಾಲಾಜಿ ಅನಿಸಿಕೆ
ಸಿಂಧನೂರು: ಕಾರ್ಪೋರೇಟ್ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ದೇಶದ ತಳ ಸಮುದಾಯಗಳ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತಗೊಳ್ಳಲಿದ್ದಾರೆ, ನಿರುದ್ಯೋಗ ತಾಂಡವವಾಡಲಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಸಾಯಿ ಬಾಲಾಜಿ ಹೇಳಿದರು.
ನಗರದ ನೌಕರರ ಭವನದಲ್ಲಿ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಮುಂದಿರುವ ಸವಾಲುಗಳು ಸಂವಾದದಲ್ಲಿ ಮಾತನಾಡಿದರು. ಎನ್‌ಇಪಿ ಮೂಲಕ ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಆದರೆ ಮೀಸಲಾತಿ ಬಗ್ಗೆ ಎಲ್ಲಿಯೂ ಚಕಾರವೆತ್ತಿಲ್ಲ. ಸಾರ್ವಜನಿಕ ಶಿಕ್ಷಣದ ಬಲ ಕುಗ್ಗಿಸುವ ಭಾಗವಾಗಿಯೇ ಈ ನೀತಿಯನ್ನು ತರಲಾಗಿದೆ. ಕೋವಿಡ್ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ಆನ್‌ಲೈನ್ ಶಿಕ್ಷಣ ಖಾಸಗಿ ಸಂಸ್ಥೆಗಳಿಗೆ ಸಾವಿರಾರು ಕೋಟಿ ರೂ.ಲಾಭ ಮಾಡಿದೆ ಎಂದರು.
ಎನ್‌ಇಪಿ ಜಾರಿಯ ಹಿಂದೆ ಶಿಕ್ಷಣವನ್ನು ಕೇಂದ್ರೀಕರಣಗೊಳಿಸುವ ಹುನ್ನಾರ ಅಡಗಿದೆ. ಕೇಂದ್ರವೇ ತನಗೆ ಇಷ್ಟಬಂದ ವಿಷಯವನ್ನು ಪಠ್ಯದಲ್ಲಿ ಸೇರಿಸಲಿದೆ. ಈಗಾಗಲೇ ಆನ್‌ಲೈನ್ ಮೂಲಕ ಸರಕು ರೂಪದಲ್ಲಿ ಶಿಕ್ಷಣವನ್ನು ಮಾರಾಟ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಇಂಟರ್‌ನೆಟ್‌ಗೇ ನೂರಾರು ರೂ. ಖರ್ಚು ಮಾಡಬೇಕು. ಶಾಲಾ-ಕಾಲೇಜುಗಳಿಗೂ ಶುಲ್ಕ ಭರಿಸಬೇಕಿದೆ ಎಂದು ಹೇಳಿದರು.
ಎಐಸಿಸಿಟಿಯು ಮುಖಂಡ ನಾಗರಾಜ ಪೂಜಾರ್ ಮಾತನಾಡಿ, ದೇಶ ನಡೆಯುತ್ತಿರುವುದು ಜನರ ಶ್ರಮದಿಂದ, ಕಾರ್ಪೋರೇಟ್ ಕಂಪನಿಗಳಿಂದಲ್ಲ. ಖಾಸಗೀಕರಣದಿಂದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಗಗನ ಕುಸುಮವಾಗಿದೆ. ಪಠ್ಯವನ್ನು ಕೇಸರಿಕರಣಗೊಳಿಸುವುದರ ಜತೆಗೆ ಕಾರ್ಪೊರೇಟ್ ಶಿಕ್ಷಣ ನೀತಿಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ದೂರಿದರು.