ಜಿಲ್ಲೆ

ವಚನಕಾರರಿಂದ ಬಾಳಿನಲ್ಲಿ ಬೆಳಕು

ಸಿಂಧನೂರು: ಅಕ್ಕಮಹಾದೇವಿ, ಅಕ್ಕನಾಗಮ್ಮ, ಮುಕ್ತಾಯಕ್ಕ ಸೇರಿ ಬಹಳಷ್ಟು ಜನ ಮಹಿಳಾ ವಚನಕಾರ್ತಿಯರು 12ನೇ ಶತಮಾನದಲ್ಲಿ ವಚನಗಳ ರೂಪದಲ್ಲಿ ಜೀವನದ ಅನುಭವಗಳ ಮೂಲಕ ನೀಡುವುದರೊಂದಿಗೆ ಜನರಿಗೆ ಬೆಳಕು ನೀಡಿದ್ದಾರೆಂದು ಉಪನ್ಯಾಸಕಿ ಅರುಣಾ ಹಿರೇಮಠ ಹೇಳಿದರು.

ನಗರದ ಅಕ್ಕಮಹಾದೇವಿ ವಸತಿ ನಿಲಯದಲ್ಲಿ ಜಿಲ್ಲಾ ಮತ್ತು ತಾಲೂಕು ಕಸಾಪದಿಂದ ಭಾನುವಾರ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿನಿಯರು ಪಠ್ಯದ ಜತೆಗೆ ವಚನಗಳ ಸಾರವನ್ನು ಅರಿಯಬೇಕು. ಬದುಕಿನ ಮೌಲ್ಯಗಳನ್ನು ಅವುಗಳು ತಿಳಿಸಿಕೊಡುತ್ತವೆ ಎಂದರು.

ಉಪನ್ಯಾಸಕಿ ಈರಮ್ಮ ಹಿರೇಮಠ ಮಹಿಳಾ ಸಾಹಿತ್ಯ ಮಹಿಳಾ ವಚನಕಾರರು ವಿಷಯದ ಕುರಿತು ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿ 770 ಜನರು ರಚಿಸಿದ ಶರಣ ಸಾಹಿತ್ಯದಲ್ಲಿ 33 ಮಹಿಳಾ ಸಾಹಿತ್ಯಕಾರರಿದ್ದರು. ಅದರಲ್ಲಿ ಶರಣೆ ಅಕ್ಕಮಹಾದೇವಿ ಮೊದಲಿಗರಾಗಿ ನಿಲ್ಲುತ್ತಾರೆ ಎಂದರು.

ಉಪನ್ಯಾಸಕಿ ವಿಜಯಲಕ್ಷ್ಮೀ ಗುರಿಕಾರ ಮಾತನಾಡಿ, ಹೆಣ್ಣು ಜಗದ ಕಣ್ಣು, ಅನ್ನೋ ಹಾಗೆ ತಾಯಿ ಜಗದ ಕಣ್ಣು, ಜಗದೋದ್ಧಾರಕಿಯಾಗಿದ್ದಾಳೆ. ಹೆತ್ತ ತಾಯಿಯನ್ನು ಪೂಜಿಸಿದರೆ ನೂರು ದೇವತೆಗಳನ್ನು ಪೂಜಿಸಿದಂತಾಗುತ್ತದೆ ಎಂದು ಹೇಳಿದರು.

ಕಸಾಪ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಅಧ್ಯಕ್ಷತೆ ವಹಿಸಿಕೊಂಡಿದ್ದರು. ದತ್ತಿ ದಾನಿಗಳಾದ ಶಕುಂತಲಾ ಪಾಟೀಲ್, ರಮಾದೇವಿ ಶಂಭೋಜಿ, ದೇವಿರಮ್ಮ, ಶಿವಮೂರ್ತಿ ಹಿರೇಮಠ, ಎನ್.ಅಕ್ಕಮ್ಮ ಶಿವನಾಗಪ್ಪ, ಸುನಿತಾ, ಬೀರಪ್ಪ ಶಂಭೋಜಿ, ಶೇಖ ಬಶೀರ ಎತ್ಕಾರಿ ಇದ್ದರು.