ಸಿಂಧನೂರು: ಗ್ರಾಪಂಗೆ ಪಿಡಿಒ ಅಪರೂಪಕ್ಕೆ ಬರುವುದರಿಂದ ಕಚೇರಿ ಹಾಗೂ ಸಾರ್ವಜನಿಕರ ಕೆಲಸಗಳು ಸಮರ್ಪಕವಾಗಿ ನಡೆಯದೆ ಸಮಸ್ಯೆಯಾಗಿದೆ. ಇದರಿಂದಾಗಿ ಕಾಯಂ ಪಿಡಿಒ ನೇಮಕ ಮಾಡುವಂತೆ ಆಗ್ರಹಿಸಿ ತಾಪಂ ಉದ್ಯೋಗಿ ಅನ್ನಪೂಣೇಶ್ವರಿಗೆ ರೌಡಕುಂದಾ ಗ್ರಾಪಂ ಅಧ್ಯಕ್ಷ ಮಹಾಂತೇಶ ಹಿರೇಗೌಡರ್ ನೇತೃತ್ವದಲ್ಲಿ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಪಿಡಿಒ ಶೋಭಾರಾಣಿಗೆ ಹೆಚ್ಚುವರಿಯಾಗಿ ಗಾಂಧಿನಗರ ಗ್ರಾಪಂ ಹೊಣೆ ನೀಡಲಾಗಿದೆ. ಇದರಿಂದಾಗಿ ರೌಡಕುಂದಾ ಕಚೇರಿಗೆ ಸರಿಯಾಗಿ ಆಗಮಿಸುತ್ತಿಲ್ಲ. ತಿಂಗಳಿಗೆ ಒಂದೆರಡು ಬಾರಿ ಕಚೇರಿಗೆ ಬರುತ್ತಿದ್ದು, ಇದರಿಂದ ಸಾರ್ವಜನಿಕರು ಅಧ್ಯಕ್ಷ, ಸದಸ್ಯರಿಗೆ ಛೀಮಾರಿ ಹಾಕುತ್ತಿದ್ದಾರೆ. ಗ್ರಾಪಂ ಉಪಾಧ್ಯಕ್ಷೆ ರಾಜೀನಾಮೆ ಸಲ್ಲಿಸಿ 20 ದಿನಗಳಾಗಿದೆ. ಸಾಮಾನ್ಯ ಸಭೆ ಕರೆಯುವಂತೆ ಹೇಳಿದರೂ ಸ್ಪಂದಿಸುತ್ತಿಲ್ಲ. ಪಂಚಾಯಿತಿಯ ಗ್ರೇಡ್-1 ಕಾರ್ಯದರ್ಶಿಗೆ ಪಿಡಿಒ ಪ್ರಭಾರ ನೀಡಬೇಕು ಎಂದು ಒತ್ತಾಯಿಸಲಾಯಿತು.