ಜಿಲ್ಲೆ

ಸುಳ್ಳು ಹೇಳಿ ಮೂರು ಅವಧಿಗೆ ಶಾಸಕ ಪ್ರತಾಪಗೌಡ, ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಹೇಳಿಕೆ

ಸಿಂಧನೂರು: ಜನರಿಗೆ ಸುಳ್ಳು ಹೇಳಿ ಮೂರು ಅವಧಿಗೆ ಶಾಸಕರಾಗಿ ಆಯ್ಕೆಗೊಂಡಿದ್ದ ಪ್ರತಾಪಗೌಡ ಪಾಟೀಲರು, ಈಗ ಮತ್ತದೇ ಸುಳ್ಳು ಹೇಳುತ್ತಿದ್ದಾರೆ. ಆದ್ದರಿಂದ ಮತದಾರರು ಆಲೋಚನೆ ಮಾಡಿ, ಮತ ನೀಡಬೇಕು ಎಂದು ಮಸ್ಕಿ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ತುರ್ವಿಹಾಳ ಪಟ್ಟಣದ 1ನೇ ವಾರ್ಡ್‌ನಲ್ಲಿ ಸೋಮವಾರ ಪ್ರಚಾರ ನಡೆಸಿ ಮಾತನಾಡಿದರು. ಕಳೆದ ಚುನಾವಣೆಯಲ್ಲಿ ನನಗೆ ಸಂಪೂರ್ಣ ಬೆಂಬಲ ನೀಡಿದ್ದಿರಿ, ಕ್ಷೇತ್ರದ ಜನ ಮುಗ್ಧರು. ಅವರಿಗೆ ಮೋಸ ಮಾಡಿದರೆ ನಮಗೆ ಪಾಪ ತಟ್ಟದೆ ಬಿಡುವುದಿಲ್ಲ. ಈ ಚುನಾವಣೆಯಲ್ಲಿ ಸುಳ್ಳು ಹೇಳಿದವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಮಸ್ಕಿ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ನನ್ನ ಬಗ್ಗೆ ಸಣ್ಣತನ ತೀರಿದ್ದಾರೆ. ನಾನು 2008ರ ಚುನಾವಣೆಯಲ್ಲಿ ಅವರ ಮುಖವನ್ನೇ ನೋಡಿರಲಿಲ್ಲ. ಇನ್ನೂ ಮೋಸ ಮಾಡುವುದು ಎಲ್ಲಿ, ಸೋಲುವ ಭೀತಿಯಿಂದ ಇಂಥ ಹೇಳಿಕೆ ನೀಡಿ ಮತದಾರರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಮುಖಂಡರಾದ ಮಲ್ಲನಗೌಡ ದೇವರಮನಿ, ಮಂಟೆಪ್ಪ ಎಲೆಕೂಡ್ಲಿಗಿ, ಉಮರ್‌ಸಾಬ, ರಾಚಪ್ಪಯ್ಯಶೆಟ್ಟಿ, ಬಾಪುಗೌಡ ದೇವರಮನಿ, ಶರಣಬಸವ ರಡ್ಡೇರ್, ಅಬೂತರಾಬ್, ಶಾಮೀದಅಲಿ ಅರಬ್, ಶೇಖರಗೌಡ ದೇವರಮನಿ, ಮಹಾಂತೇಶ ಗಾಣಗೇರ, ವೀರಭದ್ರಗೌಡ, ಅಭಿಗೌಡ ಮಾಲಿ ಪಾಟೀಲ್, ಲಿಂಗಪ್ಪ, ಫಕೀರಪ್ಪ ಭಂಗಿ, ಮುತ್ತು, ಮರಿಸ್ವಾಮಿ ಇದ್ದರು.

ನಾನು ಮುಂದೆ ಹಣ ಕಳಿಸಿ, ಪ್ರಚಾರ ಸಂದರ್ಭದಲ್ಲಿ ಅವರಿಂದ ಚುನಾವಣೆಗೆ ದೇಣಿಗೆ ಪಡೆಯುತ್ತಿದ್ದೇನೆ ಎಂದು ಪ್ರತಾಪಗೌಡ ಪಾಟೀಲ್ ಹೇಳಿದ್ದಾರೆ. ಅಂಥ ಸಾಕ್ಷಿ ಇದ್ದರೆ ತೋರಿಸಲಿ. ಮಸ್ಕಿ ಮಲ್ಲಿಕಾರ್ಜುನ ದೇವರ ಮೇಲೆ ಆಣೆ ಮಾಡಿ ಹೇಳಲಿ. ಸುಮ್ಮನೆ ಅಪಪ್ರಚಾರ ಸಲ್ಲದು. | ಆರ್.ಬಸನಗೌಡ ತುರ್ವಿಹಾಳ ಕಾಂಗ್ರೆಸ್ ಅಭ್ಯರ್ಥಿ, ಮಸ್ಕಿ