ಸಿಂಧನೂರು: ತಾಲೂಕಿನ ಕಲ್ಲೂರು ಗ್ರಾಮದಲ್ಲಿ ತಾಯಿ, ಮಕ್ಕಳ ಆಸ್ಪತ್ರೆ ಕುರಿತು ಸರ್ವ ಪಕ್ಷಗಳ ಮುಖಂಡರು ಶನಿವಾರ ಸಭೆ ನಡೆಸಿ, ಸ್ಥಳೀಯ ಪಿಡಬ್ಲ್ಯುಡಿ ಕ್ಯಾಂಪ್ ಬಳಿಯ ನೀರಾವರಿ ಇಲಾಖೆಯ ಜಾಗದಲ್ಲೇ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕ ವೆಂಕಟರಾವ ನಾಡಗೌಡರಿಗೆ ಒತ್ತಾಯಿಸಿದರು.
ನಗರದ ತಹಸಿಲ್ ಕಚೇರಿಯಲ್ಲಿ ಶನಿವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ನಗರದಿಂದ ದೂರದಲ್ಲಿರುವ ಕಲ್ಲೂರಿನಲ್ಲಿ ಆಸ್ಪತ್ರೆ ಮಾಡಿದರೆ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ನಗರ ವ್ಯಾಪ್ತಿಯಲ್ಲೇ ಆಸ್ಪತ್ರೆ ಮಾಡಿ. ನೀರಾವರಿ ಇಲಾಖೆ ಜಾಗೆಯಲ್ಲಿ ಆಸ್ಪತ್ರೆ ಮಾಡಿದರೆ ಜನರಿಗೂ ಅನುಕೂಲವಾಗುತ್ತದೆ ಎಂದರು.
ಶಾಸಕ ವೆಂಕಟರಾವ್ ನಾಡಗೌಡ, ನೀರಾವರಿ ಇಲಾಖೆ ಜಾಗೆಯಲ್ಲಿ ಈಗಾಗಲೇ ಪೊಲೀಸ್ ಠಾಣೆಗಳನ್ನು ಮಾಡಲಾಗುತ್ತಿದ್ದು, ಜಾಗೆಯ ಸಮಸ್ಯೆ ಎದುರಾಗಬಹುದು ಎಂದು ಸಂಶಯ ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ ಮಾಜಿ ರಾಜ್ಯ ಅಧ್ಯಕ್ಷ ಬಸನಗೌಡ ಬಾದರ್ಲಿ ಮಾತನಾಡಿ, ನಗರದಲ್ಲಿಯೇ ಆಸ್ಪತ್ರೆ ಮಾಡಬೇಕು ಎಂದು ಒತ್ತಾಯಿಸಿದರು. ಬಳಿಕ ನೀರಾವರಿ ಇಲಾಖೆಯ ಜಾಗೆಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವ ಕುರಿತಂತೆ ತೀರ್ಮಾನಿಸಿ ನೀರಾವರಿ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಸ್ಥಳ ನೀಡುವಂತೆ ಮನವಿ ಮಾಡುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರುಪಾಪುರ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ, ಮುಖಂಡ ಸಾಯಿರಾಂ ಕೃಷ್ಣ ಸೇರಿ ಇತರರು ಇದ್ದರು.
ಸಿಂಧನೂರಿನ ಸರ್ಕಿಟ್‌ಹೌಸ್ ಬಳಿ, ಕುಷ್ಟಗಿ ರಸ್ತೆಯ ಕೋಲ್ಡ್ ಸ್ಟೋರೇಜ್ ಹತ್ತಿರ, ಸತ್ಯಗಾರ್ಡನ್ ಹತ್ತಿರ ಸರ್ಕಾರಿ ಜಾಗೆಯನ್ನು ವೀಕ್ಷಣೆ ಮಾಡಲಾಗಿದೆ. ಆದರೆ, ಆಸ್ಪತ್ರೆಗೆ ಅವಶ್ಯವಿದ್ದಷ್ಟು ಜಾಗೆ ಇಲ್ಲ. ಹೀಗಾಗಿ ಕಲ್ಲೂರು ಗ್ರಾಮದ ಹತ್ತಿರ ಆಸ್ಪತ್ರೆ ನಿರ್ಮಿಸುತ್ತಿದ್ದೇವೆ. ಇದರಲ್ಲಿ ಬೇರೆ ಉದ್ದೇಶವಿಲ್ಲ.| ವೆಂಕಟರಾವ ನಾಡಗೌಡ ಶಾಸಕ, ಸಿಂಧನೂರು.