ಜಿಲ್ಲೆ

ಕೃಷಿಕನ ಮಗಳಿಗೆ ಒಲಿದ ಪಿಎಸ್‌ಐ ಹುದ್ದೆ; ಮೊದಲ ಪಯತ್ನದಲ್ಲೇ ಯಶಸ್ಸು

ಸಿಂಧನೂರು: ತಾಲೂಕಿನ ಜವಳಗೇರಾ ಹತ್ತಿರದ ಶ್ರೀನಿವಾಸಕ್ಯಾಂಪ್‌ನ ಕೃಷಿಕನ ಪುತ್ರಿ ದುರ್ಗಾಭವಾನಿ ರಾಮಕೃಷ್ಣ ಉಪಲಪಾಟಿ ಎಂಬುವರು ಪಿಎಸ್‌ಐ ಮಹಿಳಾ ನೇಮಕಾತಿ ಪಟ್ಟಿಯಲ್ಲಿ 29ನೇ ರ‌್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ.

ನಗರದ ವಿಕಾಸ ಭಾರತಿ ವಸತಿ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ ದುರ್ಗಾಭವಾನಿ ಪಿಯುಸಿಯನ್ನು ಸ್ಥಳೀಯ ಡಾಫಡಿಲ್ಸ್ ಕಾಲೇಜ್‌ನಲ್ಲಿ ಮುಗಿಸಿ ಧಾರವಾಡದಲ್ಲಿ ಬಿಎಸ್ಸಿ ಅಗ್ರಿ ವಿಭಾಗದಲ್ಲಿ ವ್ಯಾಸಾಂಗ ಮಾಡಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗೆ ಹಳೆಯ ಪ್ರಶ್ನೆ ಪತ್ರಿಕೆ, ನೋಟ್ಸ್, ಪರೀಕ್ಷೆಗೆ ಸಂಬಂಧಿಸಿದ ಬುಕ್ಸ್‌ಗಳನ್ನು ಅಭ್ಯಾಸ ಮಾಡಿದ್ದರು. ನಿರಂತರ ಓದಿನ ಫಲದಿಂದಲೇ ಮೊದಲ ಪ್ರಯತ್ನದಲ್ಲಿ ಪಿಎಸ್‌ಐ ಹುದ್ದೆಗೇರಿದ್ದಾರೆ.

ಶ್ರೀನಿವಾಸಕ್ಯಾಂಪ್‌ನ ಮಹಿಳೆ ಪಿಎಸ್‌ಐ ಪರೀಕ್ಷೆಯನ್ನು ಒಂದೇ ಬಾರಿಗೆ ಪಾಸ್ ಮಾಡಿರುವುದು ಇಡೀ ತಾಲೂಕಿಗೆ ಒಂದು ಹೆಮ್ಮೆಯಾಗಿದೆ. ಅವರ ಓದಿಗೆ ಕುಟುಂಬಸ್ಥರು ಹಾಗೂ ಶಿಕ್ಷಕರು ಸಾಥ್ ನೀಡಿದ್ದರು.