ಜಿಲ್ಲೆ

ಬಿಸಿಯೂಟ ನೌಕರರ ಬೇಡಿಕೆ ಈಡೇರಿಸಿ

ನೌಕರರ ಸಂಘದ ತಾಲೂಕು ಸಮಿತಿ ಆಗ್ರಹ

ಸಿಂಧನೂರು: ಅಕ್ಷರ ದಾಸೋಹ ಬಿಸಿಯೂಟ ನೌಕರರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ತಾಲೂಕು ಸಮಿತಿ ಪದಾಧಿಕಾರಿಗಳು ತಹಸೀಲ್ದಾರ್ ಶಿವಾನಂದ ಸಾಗರಗೆ ಶುಕ್ರವಾರ ಮನವಿ ಸಲ್ಲಿಸಿದರು.

2001 ರಿಂದ ಮಧ್ಯಾಹ್ನ ಬಿಸಿಯೂಟ ಯೋಜನೆ ಪ್ರಾರಂಭವಾದಾಗಿನಿಂದ ಬಿಸಿಯೂಟ ನೌಕರರ ಒಂದೂ ಬೇಡಿಕೆ ಈಡೇರಿಸಿಲ್ಲ. ಸೇವಾ ನಿಯಮಗಳಿಲ್ಲದೆ, ಕೆಲಸದ ಭದ್ರತೆಯಿಲ್ಲದೆ ದಿನವಿಡೀ ದುಡಿಯುವ ನಮ್ಮ ಪ್ರಜಾಸತ್ತಾತ್ಮಕ ಹೋರಾಟಗಳ ಮೇಲೆ ನಿಷೇಧ ಹೇರುವುದು ಎಷ್ಟು ಸರಿ. ನ್ಯಾಯುತ ಬೇಡಿಕೆ ಈಡೇರಿಸುವುದು ಸರ್ಕಾರದ ಕರ್ತವ್ಯವಾಗಿದೆ. ದುಡಿಮೆಗೆ ಪ್ರತಿಫಲ ಕೇಳುತ್ತಿದ್ದೇವೆ. ಹೋರಾಟ ಹತ್ತಿಕ್ಕಲು ಬಿಡುವುದಿಲ್ಲ.

ಕೂಡಲೇ ಬಿಸಿಯೂಟ ನೌಕರರಿಗೆ ಕನಿಷ್ಠ 6 ಸಾವಿರ ರೂ. ವೇತನ ಹೆಚ್ಚಳ ಮಾಡಬೇಕು. ಎಲ್‌ಐಸಿ ಆಧಾರಿತ ನಿವೃತ್ತಿ ವೇತನ ಜಾರಿ ಮಾಡಬೇಕು. ಅಡುಗೆ ಕೆಲಸದೊಟ್ಟಿಗೆ ಡಿ.ಗ್ರೂಪ್ ನೌಕರರು ಇಲ್ಲದಿರುವುದರಿಂದ ಆ ಕೆಲಸಗಳಿಗೆ ಪರೋಕ್ಷವಾಗಿ ಈಗಾಗಲೇ ಅಡುಗೆಯವರಿಂದಲೇ ಮಾಡಿಸುತ್ತಿದ್ದು, ಆದ್ದರಿಂದ ಡಿ ಗ್ರೂಪ್ ಕೆಲಸಗಳನ್ನು ಅಧಿಕೃತವಾಗಿ ಬಿಸಿಯೂಟ ನೌಕರರಿಗೆ ಜವಾಬ್ದಾರಿ ವಹಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಗೌರವ ಅಧ್ಯಕ್ಷ ಶೇಕ್ಷಖಾದ್ರಿ, ಜಿಲ್ಲಾಧ್ಯಕ್ಷೆ ಕೆ.ಶರಣಮ್ಮ, ತಾಲೂಕು ಅಧ್ಯಕ್ಷೆ ವಿಶಾಲಾಕ್ಷಿ, ಖಜಾಂಚಿ ಜಿ.ಗಂಗಮ್ಮ, ಪ್ರಧಾನ ಕಾರ್ಯದರ್ಶಿ ಶರಣಮ್ಮ ಪಾಟೀಲ್ ಇದ್ದರು.