ಜಿಲ್ಲೆ

ಬಿಜೆಪಿ ಮುಖಂಡ ರವಿಕಾಂತ ನಾಯ್ಕೋಡಿ ಮೇಲೆ ಹಲ್ಲೆ

ಸಿಂದಗಿ: ಪಟ್ಟಣದ ಹೊರವಲಯದ ಆಲಮೇಲ ರಸ್ತೆಯಲ್ಲಿನ ಅರ್ಪಿತಾ ಧಾಬಾದಲ್ಲಿ ಬಿಜೆಪಿ ಯುವ ಮುಖಂಡನ ಮೇಲೆ ಸೋಮವಾರ ತಡರಾತ್ರಿ ತಲವಾರದಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಲಾಗಿದೆ.

ತಾಲೂಕು ಬಿಜೆಪಿ ಮಂಡಲದ ಒಬಿಸಿ ವಿಭಾಗದ ಅಧ್ಯಕ್ಷ ರವಿಕಾಂತ ಮಡಿವಾಳಪ್ಪ ನಾಯ್ಕೋಡಿ (29) ಸೋಮವಾರ ರಾತ್ರಿ ತನ್ನ ಆಪ್ತರೊಂದಿಗೆ ಅರ್ಪಿತಾ ಧಾಬಾದಲ್ಲಿ ಊಟಕ್ಕೆ ಕುಳಿತಾಗ ತಾಲೂಕಿನ ಬಬಲೇಶ್ವರ ಗ್ರಾಮದ ಅನೀಲ ಜೆಟ್ಟೆಪ್ಪ ಬರಗಾಲ ತಲವಾರದಿಂದ ಏಕಾಏಕಿ ದಾಳಿ ನಡೆಸಿದ್ದಾನೆ. ದಾಳಿ ವೇಳೆ ರವಿಕಾಂತ ತನ್ನ ಎಡಗೈಯನ್ನು ಅಡ್ಡ ತಂದಿದ್ದರಿಂದ ಕೈಗೆ ಭಾರಿ ಪೆಟ್ಟಾಗಿದೆ. ಅವರ ಪಕ್ಕದಲ್ಲಿದ್ದ ಮಲ್ಲು ಬಾದನ ಹಾಗೂ ನಾಗಪ್ಪ ಬಿರಾದಾರ ಕಿಡಿಗೇಡಿಗಳ ದಾಳಿಯನ್ನು ತಡೆಯಲು ಮುಂದಾದಾಗ ಅನೀಲ ತನ್ನ ಜೊತೆಗಾರ ತಾಲೂಕಿನ ರಾಂಪುರ ಪಿಎ ಗ್ರಾಮದ ಯುವರಾಜ ಸೇರಿ ಇತರ ನಾಲ್ಕೈದು ಜನರೊಂದಿಗೆ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ.

ತಲವಾರ ಏಟಿನಿಂದ ರವಿಕಾಂತನ ಕೈಗೆ ಪೆಟ್ಟಾಗಿದ್ದು, ತಕ್ಷಣವೇ ಸಿಂದಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದ ಬಬಲೇಶ್ವರ ಗ್ರಾಮದ ಅನೀಲ ಜೆಟ್ಟೆಪ್ಪ ಬರಗಾಲ ಹಾಗೂ ರಾಂಪುರ ಪಿಎ ಗ್ರಾಮದ ಯುವರಾಜ ಸೇರಿ ನಾಲ್ಕೈದು ಜನರ ವಿರುದ್ಧ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಮಾಡಿದ ಅನೀಲ ಹಾಗೂ ಹಲ್ಲೆಗೊಳಗಾದ ಬಿಜೆಪಿ ಮುಖಂಡ ರವಿಕಾಂತ ನಾಯ್ಕೋಡಿ ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಈ ಹಿಂದೆ ಗ್ರಾಮದಲ್ಲಿ ನಡೆದ ಹಣದ ವ್ಯವಹಾರದ ಹಿನ್ನೆಲೆ ಈ ಕೊಲೆ ಯತ್ನ ನಡೆದಿರಬಹುದೆಂದು ಪೊಲೀಲಿಸರು ಶಂಕಿಸಿದ್ದಾರೆ.