ಜಿಲ್ಲೆ

ಪಂಚಮಸಾಲಿ 2ಎ ಮೀಸಲಾತಿ ಬೇಡಿಕೆಗಾಗಿ ಧರಣಿ

ಸಿಂದಗಿ: ರಾಜ್ಯ ಸರ್ಕಾರದಿಂದ 2ಎ ಮತ್ತು ಕೇಂದ್ರ ಸರ್ಕಾರದಿಂದ ಒಬಿಸಿ ಮೀಸಲಾತಿ ಹಕ್ಕೊತ್ತಾಯಿಸಿ ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜದಿಂದ ಗುರುವಾರ ಒಂದು ದಿನದ ಧರಣಿ ನಡೆಸಲಾಯಿತು.

ಮುರುಗೆಪ್ಪಗೌಡ ರದ್ದೇವಾಡಗಿ, ಎಂ.ಎಂ.ಹಂಗರಗಿ, ಚಂದ್ರೇಗೌಡ ಪಾಟೀಲ, ಆನಂದ ಶಾಬಾದಿ, ಸಂತೋಷ ಪಾಟೀಲ, ಎಚ್.ಎಂ.ಉತ್ನಾಳ, ಮುತ್ತು ಶಾಬಾದಿ ಮತ್ತಿತರರು ಮಾತನಾಡಿ, ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುವ ಜತೆಗೆ ಮೀಸಲಾತಿ ಹಕ್ಕನ್ನು ಕಲ್ಪಿಸುವುದಾಗಿ ಭರವಸೆ ನೀಡಿತ್ತು. ಭರವಸೆಗೆ ಗೌರವ ಕೊಟ್ಟು ತಾಳ್ಮೆಯಿಂದ ಕಾಯುತ್ತಿದ್ದ ಪಂಚಮಸಾಲಿ ಸಮಾಜಕ್ಕೆ ಬೇಡಿಕೆ ಭರವಸೆಯಲ್ಲಿಯೇ ಹುಸಿಯಾಗಿದೆ ಎಂದು ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಬಹುಪಾಲಿನ ಶಕ್ತಿಯಾಗಿರುವ ಪಂಚಮಸಾಲಿ ಸಮಾಜದ ನಾಯಕರು ಸರ್ಕಾರ ಮತ್ತು ಸಿಎಂ ಮೇಲೆ ಒತ್ತಡ ಹಾಕುವ ಮೂಲಕ ಮೀಸಲಾತಿ ಪಡೆಯುವ ಹೊಣೆಗಾರಿಕೆ ಪ್ರದರ್ಶಿಸಬೇಕು. 2ಎ ಮೀಸಲಾತಿ ಬೇಡಿಕೆ ಬಹುದಿನಗಳದ್ದಾಗಿದ್ದು, ನಮ್ಮ ಸಮಾಜದ ಮಕ್ಕಳಿಗೆ 2ಎ ಮೀಸಲಾತಿ ಒಂದು ನಿರ್ದಿಷ್ಟ ಭವಿಷ್ಯತ್ತನ್ನು ರೂಪಿಸುತ್ತದೆ ಎಂದು ಕನಸು ಕಂಡಿದ್ದೆವು. ಆದರೆ, ಇಂದಿಗೂ ನನಸಾಗಿಲ್ಲ. ಕೂಡಲೇ ಸರ್ಕಾರ ಪಂಚಮಸಾಲಿ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ನ್ಯಾಯವಾದಿ ಎಸ್.ಬಿ.ಪಾಟೀಲ, ಮಲ್ಲನಗೌಡ ಪಾಟೀಲ, ಶ್ರೀಶೈಲ ಚಳ್ಳಗಿ, ಚಂದ್ರಶೇಖರ ನಾಗರಬೆಟ್ಟ, ಚೇತನ ರಾಂಪೂರ, ರುದ್ರಗೌಡ ಪಾಟೀಲ, ಶಂಕರಗೌಡ ಬಿರಾದಾರ, ಬಾಪುಗೌಡ ಪಾಟೀಲ ಎಸ್.ಬಿ.ಪಾಟೀಲ, ದಾನಪ್ಪಗೌಡ ಚನಗೊಂಡ ಇತರರಿದ್ದರು.