ಸಿಂದಗಿ ಪಟ್ಟಣದ ಸಾರಂಗಮಠದಲ್ಲಿ ಹಮ್ಮಿಕೊಂಡಿದ್ದ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರ ಪುರಾಣ-ಪ್ರವಚನ ಕಾರ್ಯಕ್ರಮಕ್ಕೆ ಶ್ರೀಗಳು ಚಾಲನೆ ನೀಡಿದರು. ಸಿದ್ಧಲಿಂಗ ಶಿವಾಚಾರ್ಯರು, ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಬಸವಪ್ರಭು ಸ್ವಾಮೀಜಿ ಇತರರಿದ್ದರು. 
ಜಿಲ್ಲೆ

ಬದುಕಿಗೆ ಗುರುವೆಂಬ ಶಕ್ತಿಯ ಕರುಣೆ ಅವಶ್ಯ

ಸಿಂದಗಿ: ಜಗತ್ತಿನಲ್ಲಿ ಗುರು ಶ್ರೇಷ್ಠ. ನಾವು ಭವ ಗೆಲ್ಲಲು ಗುರು ಎಂಬ ದೊಡ್ಡ ಶಕ್ತಿಯ ಕರುಣೆ ನಮಗೆ ಅವಶ್ಯಕ ಎಂದು ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.

ಸಾರಂಗಮಠದಲ್ಲಿ ಪೂಜ್ಯ ಶ್ರೀ ಚೆನ್ನವೀರ ಮಹಾಸ್ವಾಮೀಜಿ ಅವರ 130ನೇ ಜಯಂತ್ಯುತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಉಜ್ಜಯಿನಿ ಪೀಠದ ಮಹಾನ್ ತಪಸ್ವಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರ ಪುರಾಣ-ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿವನಿಗಿಂತಲೂ ದೊಡ್ಡವ ಗುರು. ಆತನ ಸಂಸ್ಕಾರ, ಅನುಗ್ರಹದೊಂದಿಗೆ ಕೃಪೆಯೂ ಲಭಿಸಿದರೆ ಶಿವನ ದರ್ಶನವೂ ಸಾಧ್ಯವಾಗುತ್ತದೆ. ಗುರು ಕರುಣೆಯಿಂದ ನಾವು ನಮ್ಮ ಜೀವನದ ಮುಕ್ತಿ ಕಾಣಬಹುದಾಗಿದೆ. ಗುರುಗಳನ್ನು ಪೂಜಿಸಿ, ಪ್ರೀತಿಸಬೇಕು ಎಂದರು.

ಪಾವನ ಸಾನ್ನಿಧ್ಯ ವಹಿಸಿದ್ದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿ, ಮನುಜರ ಸದ್ಗತಿಗೆ ಗುರುವಿನ ಸ್ಥಾನ ಪ್ರಾಮುಖ್ಯತೆ ಪಡೆದಿದೆ. ಗುರುವಿನ ವಿದ್ವತ್ತನ್ನು ತುಲನೆ ಮಾಡುವುದು ಅಸಾಧ್ಯ. ಜ್ಞಾನದ ಶ್ರೇಷ್ಠತೆಯನ್ನು ಅರಿತವರೆ ಪವಿತ್ರರು. ಶ್ರೀಮಠದ ಗುರು ಚೆನ್ನವೀರ ಸ್ವಾಮೀಜಿ ಕೃಷಿಯನ್ನು ಮಾಡಿ ಆಳಿಗಿಂತ ಆಳಾಗಿ ದುಡಿದು ರೈತರಾಗಿ ಪ್ರಶಸ್ತಿ, ಗೌರವಗಳನ್ನು ಪಡೆದು ಕೃಷಿಯೇ ದೇಶದ ಬೆನ್ನೆಲುಬು ಎಂಬುದನ್ನು ಸಾಧಿಸಿದ್ದರು ಎಂದರು.

ಸಮ್ಮುಖ ವಹಿಸಿದ್ದ ವಿರಕ್ತಮಠದ ಬಸವಪ್ರಭು ಸ್ವಾಮಿಗಳು ಆಶೀರ್ವಚನ ನೀಡಿದರು. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಹುಚ್ಚಯ್ಯ ಗವಾಯಿಗಳು ಸಂಗೀತ ಸೇವೆಗೈದರು. ಸಿದ್ಧರಾಮ ಬ್ಯಾಕೋಡ ತಬಲಾ ಸಾಥ್ ನೀಡಿದರು. ಡಾ.ಶರಣಬಸವ ಜೋಗೂರ ಸ್ವಾಗತಿಸಿದರು. ಕುಮಾರಿ ಪೂಜಾ ಹಿರೇಮಠ ನಿರೂಪಿಸಿ ವಂದಿಸಿದರು.