ಸಿಂದಗಿ ಪಟ್ಟಣದ ಸಂಗಮ ಸಂಸ್ಥೆಯಲ್ಲಿ ನಡೆದ ಮಾಹಿತಿ ಹಕ್ಕು ಅಧಿನಿಯಮ ಕಾರ್ಯಾಗಾರವನ್ನು ಫಾದರ್ ಸಂತೋಷ ಉದ್ಘಾಟಿಸಿದರು. ಪರಶುರಾಮ ಬೇಲೂರ, ಸಿಸ್ಟರ್ ಸಿಂಥಿತಾ ಡಿ. ಮೆಲ್ಲೋ ಮತ್ತಿತರರಿದ್ದರು. 
ಜಿಲ್ಲೆ

ಯುವಕರು ಮಾಹಿತಿ ಹಕ್ಕು ಕಾಯ್ದೆ ಪ್ರಯೋಜನ ಪಡೆಯಿರಿ

Vijayapura - Desk - Chinnayya Chinnayyanamath

ಸಿಂದಗಿ: ಮಾಹಿತಿ ಹಕ್ಕು ಅಧಿನಿಯಮ 2005 ಒಂದು ಸಂಸತ್ತಿನ ಕಾಯ್ದೆಯಾಗಿದೆ. ಇದರಡಿ ಯಾವುದೇ ನಾಗರಿಕನು ಸಾರ್ವಜನಿಕ ಪ್ರಾಧಿಕಾರಗಳ ಮೂಲಕ ಅಗತ್ಯವಾದ ಮಾಹಿತಿಗಳನ್ನು ಪಡೆಯಬಹುದಾಗಿದೆ ಎಂದು ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ನಿರ್ದೇಶಕ ಫಾದರ್ ಸಂತೋಷ ಹೇಳಿದರು.

ಬಸವನಗರದಲ್ಲಿನ ಸಂಗಮ ಸಂಸ್ಥೆಯಲ್ಲಿ ನಡೆದ ಮಾಹಿತಿ ಹಕ್ಕು ಕಾಯ್ದೆ 2005ರ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿ, ಅಕ್ಟೋಬರ್ 2ರ 2005ರಲ್ಲಿ ಜಾರಿಗೆ ಬಂದ ಈ ಕಾಯ್ದೆಯು ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯಿಸುತ್ತದೆ. ಸಾರ್ವಜನಿಕರು ಮಾಹಿತಿ ಹಕ್ಕಿನಡಿ ಕೋರಿದ ಮಾಹಿತಿಯನ್ನು ಕಾಲಮಿತಿ ಅನುಸಾರ ಸಂಬಂಧಿಸಿದ ಆಡಳಿತವು ಒದಗಿಸಬೇಕು. ತಪ್ಪಿದ್ದಲ್ಲಿ ಅರ್ಜಿದಾರ ಮೇಲ್ಮನವಿಯನ್ನು ಸಲ್ಲಿಸುವ ಹಕ್ಕು ಹೊಂದಿರುತ್ತಾನೆ. ಯುವಕರು ಈ ಹಕ್ಕನ್ನು ಪ್ರತಿಪಾದಿಸಿ ಮಾಹಿತಿ ಹಕ್ಕನ್ನು ಅರಿಯುವ ಮೂಲಕ ಸಂಬಂಧಿಸಿದವರ ಬಳಿ ಸೂಕ್ತ ಮಾಹಿತಿಯನ್ನು ಪಡೆಯಬೇಕು ಎಂದು ಸಲಹೆ ನೀಡಿದರು.

ಮಾಹಿತಿ ಹಕ್ಕು ಹೋರಾಟಗಾರ ಪರಶುರಾಮ ಬೇಲೂರ ಮಾತನಾಡಿ, ಯುವಕರು ಶಿಕ್ಷಣ, ಸಂಘಟನೆ ಮೂಲಕ ಸದೃಢಗೊಳ್ಳಬೇಕು. ತಮ್ಮ ಗ್ರಾಮದ ಅಭಿವೃದ್ಧಿ ಕುರಿತು, ಗ್ರಾಮಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆಯಬಹುದು. ಇಲ್ಲವೇ ಈ ಹಕ್ಕಿನಡಿ ಅರ್ಜಿ ಹಾಕಿ ಮಾಹಿತಿಯನ್ನು ಪಡೆಯಬಹುದಾಗಿದೆ. ಅರ್ಜಿಗೆ ಸ್ಪಂದಿಸದ ಆಡಳಿತ, ಇಲಾಖೆ ಮತ್ತು ಅಧಿಕಾರಿಗಳ ವಿರುದ್ಧ 30ದಿನಗಳ ನಂತರ ಮಾಹಿತಿ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ. ಅದಕ್ಕೂ ಉತ್ತರ ಸಿಗದಿದ್ದರೆ, 90 ದಿನಗಳ ನಂತರ ಎರಡನೇ ಮೇಲ್ಮನವಿ ಸಲ್ಲಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ್ ಸಿಂಥಿತಾ ಡಿ. ಮೆಲ್ಲೋ ಮಾತನಾಡಿದರು. ಬಸವರಾಜ ಬಿಸನಾಳ ಸಂವಿಧಾನದ ಪ್ರಸ್ತಾವನೆ ಓದಿದರು. ರಾಜೀವ ಕುರಿಮನಿ, ರಾವುತ ಗುಬ್ಬೆವಾಡ, ತೇಜಸ್ವಿನಿ ಹಳ್ಳದಕೇರಿ, ಗುಬ್ಬೇವಾಡ ಯುವಕ ಸಂಘದ ದೇವಿಂದ್ರ ಗುಬ್ಬೇವಾಡ, ಸಿಂದಗಿ ಯುವಕ ಸಂಘದ ಅಧ್ಯಕ್ಷ ಯಾಸೀನ ಮುಲ್ಲಾ, ಹುಣಶ್ಯಾಳ ಯುವಕ ಸಂಘದ ಉಮೇಶ ದೊಡಮನಿ ಹಾಗೂ ವಿವಿಧ ಹಳ್ಳಿಗಳ ಯುವಕರು ಭಾಗವಹಿಸಿದ್ದರು.