ಸಿಂದಗಿ: ಪುರಸಭೆ ಅಧಿಕಾರಿಗಳು ನಗರದ ಕಾಲೇಜು ರಸ್ತೆ, ವಿಜಯಪುರ ರಸ್ತೆಗಳಲ್ಲಿನ ಅಕ್ರಮ ಶೆಡ್‌ಗಳನ್ನು ತೆರವುಗೊಳಿಸಲು ಶನಿವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿ ಅತಿಕ್ರಮಣ ತೆರವು ಮಾಡುವಲ್ಲಿ ಯಶಸ್ವಿಯಾದರು.
ಕಳೆದ ಒಂದು ತಿಂಗಳಿನಿಂದಲೂ ಪಟ್ಟಣದ ಪ್ರಮುಖ ರಸ್ತೆಗಳಲ್ಲಿನ ಅಕ್ರಮ ಶೆಡ್‌ಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಪುರಸಭೆ ಅಧಿಕಾರಿಗಳು ಮಹಾತ್ಮ ಗಾಂಧೀಜಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ಎದುರು ಹಾಗೂ ನಿಲ್ದಾಣದ ಪಕ್ಕದ ರಸ್ತೆಗಳಲ್ಲಿನ ಅಕ್ರಮ ಶೆಡ್‌ಗಳನ್ನು ತೆರವುಗೊಳಿಸಲು ಸೂಚಿಸಿದಾಗ ಬಹುತೇಕರು ಶೆಡ್‌ಗಳನ್ನು ತಮ್ಮ ಇಚ್ಛೆಯಂತೆ ತೆರವುಗೊಳಿಸಿದ್ದರು.
ತಹಸೀಲ್ದಾರ್ ಕಚೇರಿಯ ಎರಡು ಬದಿಯಲ್ಲಿ ಹಾಗೂ ಬಸವೇಶ್ವರ ವೃತ್ತದಲ್ಲಿ ಅಕ್ರಮವಾಗಿ ಇಟ್ಟಿದ್ದ ಶೆಡ್‌ಗಳನ್ನು ಖುದ್ದು ತೆರವುಗೊಳಿಸಲು ಪುರಸಭೆಯಿಂದ ಅ.25ರ ವರೆಗೆ ಗಡುವು ನೀಡಲಾಗಿತ್ತು.
ಆದರೆ, ಇಲ್ಲಿನ ವ್ಯಾಪಾರಿಗಳು ತೆರವು ಕಾರ್ಯಾಚರಣೆ ವಿರೋಧಿಸಿ, ಬಿಜೆಪಿ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಿ, ತೆರವುಗೊಳಿಸದಂತೆ ಮನವಿ ಸಲ್ಲಿಸಿದ್ದರು. ಜತೆಗೆ ಅಲ್ಲಿನ ಅಂಗಡಿಕಾರರಿಗೆ ಕೆಲವು ಯುವಕರು ತೆರವಿನ ಗಡುವು ಮೀರಿದರೂ, ಎರಡನೇ ಬಾರಿ ಪ್ರತಿಭಟನೆ ನಡೆಸಿ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ರಾತ್ರಿಯೇ ದಿಢೀರನೆ ಚಾಪೆ ಹಾಸಿಕೊಂಡು ಧರಣಿ ನಡೆಸಿದ್ದರು.
ಪುರಸಭೆ ಅಧಿಕಾರಿಗಳು ಶನಿವಾರ ಬೆಳಗ್ಗೆಯೇ ಬಸವೇಶ್ವರ ವೃತ್ತದಿಂದ ಅಕ್ರಮವಾಗಿ ನಿಲ್ಲಿಸಿದ್ದ ಶೆಡ್‌ಗಳ ತೆರವು ಕಾರ್ಯಾಚರಣೆ ನಡೆಸಿದರು. ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮುಖ್ಯಾಧಿಕಾರಿ ಎಸ್.ರಾಜಶೇಖರ, ನಬಿರಸೂಲ ಉಸ್ತಾದ, ಇಂದುಮತಿ ಮಣೂರ, ಅಜರ ನಾಟಿಕಾರ, ದಯಾನಂದ ಇವಣಿ, ಸಿದ್ದು ಅಂಗಡಿ, ಅಲ್ತಾಪ್ ಮುಜಾವರ, ಅನೀಲ ಕರಾಬಿ, ರಮೇಶ ಪಾಟೀಲ, ಸಿಪಿಐ ನಾನಾಗೌಡ ಪಾಟೀಲ, ಠಾಣಾಧಿಕಾರಿ ಆರೀಫ್ ಮುಶಾಪುರೆ, ಆಲಮೇಲ ಪಿಎಸ್‌ಐ ಅರವಿಂದ ಅಂಗಡಿ ಸೇರಿ ಸಿಂದಗಿ, ಆಲಮೇಲ ಹಾಗೂ ಕಲಕೇರಿ ಠಾಣೆಯ ಪೊಲೀಸ್ ಸಿಬ್ಬಂದಿ ಇದ್ದರು.