ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿಗಳ ಅಧ್ಯಕ್ಷರ ಆಯ್ಕೆ ಚುನಾವಣೆಗಳು ಸರಣಿಯಾಗಿ ಶುರುವಾಗಿದ್ದು. ಈ ಮಧ್ಯೆ ತಾಲೂಕಿನ ಸಿಂದಗಿ ಗ್ರಾಮದಲ್ಲಿ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯೆಯೊಬ್ಬರಿಗೆ ಚಾಕು ತೋರಿಸಿ ಅಪಹರಿಸಿಕೊಂಡು ಹೋಗಲು ಯತ್ನಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಗ್ರಾಪಂ ಸದಸ್ಯೆ ನಾಗಮ್ಮ ತುಕ್ಕಣ್ಣ ಕೊಂಡೆದ ಹಾಗೂ ಅವರ ಪುತ್ರ ಮಲ್ಲಿಕಾರ್ಜುನ ಮತ್ತು ಸಂಬAಧಿ ರಾಜಶೇಖರ ಅವರಿಗೆ ಚಾಕುವಿನಿಂದ ಇರಿದ ಗಾಯಗೊಂಡಿದ್ದು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಂಗ್ರೆಸ್‌ನವರು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಎಂದು ದೂರಲಾಗಿದೆ.
ಬಳಿಕ ಅಪಹರಣಕಾರರನ್ನು ಬೆನ್ನಟ್ಟಿದ ಜನರು ಕೆಲವರನ್ನು ಹಿಡಿದು ತಂದು ಗ್ರಾಮದಲ್ಲಿ ಕಟ್ಟಿ ಹಾಕಿ ಥಳಿಸಿದ್ದಾರೆ. ಮಾಹಿತಿ ಅರಿಯುತ್ತಲೇ ಪೊಲೀಸರು ದೌಡಾಯಿಸಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.
ಗ್ರಾಪಂ ಸದಸ್ಯರಾಗಿರುವ ನಾಗಮ್ಮ ಅವರನ್ನು ಅಪಹರಿಸಿಕೊಂಡು ಹೋಗಲು ಜೀಪಿನಲ್ಲಿ ಆರು ಜನರು ಬಂದಿದ್ದರು. ಪ್ರಶ್ನಿಸಿದ ಅವರಿಗೆ ಹಾಗೂ ಅವರ ಸಂಬAಧಿ ರಾಜಶೇಖರ ಹಾಗೂ ಪುತ್ರ ಮಲ್ಲಿಕಾರ್ಜುನ ಎಂಬುವರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಘಟನೆ ವಿವರ
ಕಲಬುರಗಿಗೆ ಸಮೀಪದ ಸಿಂದಗಿ ಗ್ರಾಮದಲ್ಲಿರುವ ಹೊಲದಲ್ಲಿ ಬುಧವಾರ ಮಧ್ಯಾಹ್ನ ಗ್ರಾಪಂ ಸದಸ್ಯರಾಗಿರುವ ನಾಗಮ್ಮ ಕೆಲಸ ಮಾಡುತ್ತಿದ್ದರು. ಈ ವೇಲೆಯಲ್ಲಿ ಅಲ್ಲಿಗೆ ಜೀಪಿನಲ್ಲಿ ಬಂದ ಆರು ಜನರು ತಾವು ಪೊಲೀಸರು ನಮ್ಮೊಂದಿಗೆ ಬನ್ನಿ ಎಂದು ಹೇಳಿ ಕರೆದುಕೊಂಡು ಹೋಗಲು ಯತ್ನಿಸಿದಾಗ, ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂಬAಧಿ ರಾಜಶೇಖರ ಎಂಬುವರು ಮಧ್ಯ ಬಂದು ಯಾರು ಎಂದು ಕೇಳಿ ನಿಲ್ಲಿಸಿದ್ದಾರೆ. ಅಷ್ಟರಲ್ಲಿ ನಾಗಮ್ಮ ಪುತ್ರ ಮಲ್ಲಿಕಾರ್ಜುನ ಸಹ ಬಂದಾಗ ಮಾತಿನ ಚಕಮಕಿ ಶುರುವಾಗಿದೆ. ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆಯಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಲು ಬಂದವರು ಚಾಕುವಿನಿಂದ ಇರಿದಿದ್ದರಿಂದ ನಾಗಮ್ಮ, ಮಲ್ಲಿಕಾರ್ಜುನ ಅವರಿಗೆ ಗಾಯಗಳಾಗಿವೆ. ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ.೪ ರಂದು ಗ್ರಾಪಂ ಅಧ್ಯಕ್ಷರ ಆಯ್ಕೆ ಚುನಾವಣೆ ನಿಗದಿಯಾಗಿದೆ. ಹೀಗಾಗಿ ಕಲಬುರಗಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ನವರೇ ತಮ್ಮ ತಾಯಿಯನ್ನು ಅಪಹರಿಸಲು ಯತ್ನಿಸಿದ್ದಾರೆ ಎಂದು ಪುತ್ರ ಮಲ್ಲಿಕಾರ್ಜುನ ಆರೋಪಿಸಿದ್ದಾರೆ. ಮಲ್ಲಿಕಾರ್ಜುನ ಕಡಗಂಚಿ, ಆಕಾಶ ರಾಣೇಶಪೀರ್, ರಾಜ, ಶಾಮ ಹಾಗೂ ಇನ್ನೊಬ್ಬ ತಮ್ಮನ್ನು ಅಪಹರಿಸಲು ಯತ್ನಿಸಿದ್ದಾರೆ. ಮೈಮುಟ್ಟಿದ್ದಾರೆ. ಈ ವೇಳೆಯಲ್ಲಿ ಕೊರಳಲ್ಲಿನ ಮಂಗಳಸೂತ್ರ ನಾಪತ್ತೆಯಾಗಿದೆ ಎಂದು ದೂರು ನೀಡಲಾಗಿದೆ. ಈ ಕುರಿತು ಉಪ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.