ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಸಭೆ ನಡೆಯಿತು. 
ಜಿಲ್ಲೆ

ಒಳಚರಂಡಿ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ

Chethan padubidri

ಪ್ರಮುಖ ಮುಖ್ಯಾಂಶಗಳು

  • ಶಾಸಕ ವೇದವ್ಯಾಸ ಕಾಮತ್ ಭರವಸೆ
ಮಂಗಳೂರು : ನಗರದ ಬೋಳೂರಿನ ಶ್ರೀ ಜಾರಂದಾಯ ದೇವಸ್ಥಾನದ ಪರಿಸರದಲ್ಲಿ ಸ್ಥಳೀಯರ ಪ್ರಮುಖ ಸಮಸ್ಯೆಯಾಗಿರುವ ಒಳಚರಂಡಿ ಕುರಿತು ದೇವಸ್ಥಾನದ ಆವರಣದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ, ಸಂಘ ಸಂಸ್ಥೆಗಳ, ಸ್ಥಳೀಯರ ಸಭೆ ನಡೆಯಿತು.
ಶಾಸಕ ಕಾಮತ್ ಮಾತನಾಡಿ "ಈ ಭಾಗದಲ್ಲಿ ಒಳಚರಂಡಿ ಇಲ್ಲದಿರುವುದೇ ಜನರ ಬಹುದೊಡ್ಡ ಸಮಸ್ಯೆಯಾಗಿದೆ. ಸುಮಾರು 75 ವರ್ಷಗಳಿಂದಲೂ ಈ ಬಗ್ಗೆ ಸ್ಥಳೀಯರ ಬೇಡಿಕೆಯಿದ್ದು ಸಮಸ್ಯೆಗೆ ಮುಕ್ತಿ ನೀಡಲೇಬೇಕೆಂದು ಹಿಂದಿನ ಅವಧಿಯಲ್ಲೇ ಕುಡ್ಸೆಂಪ್‌ನಿಂದ ಅಗತ್ಯ ಅನುದಾನ ಮೀಸಲಿರಿಸಲಾಗಿತ್ತು. ಆದರೆ ಈ ಯೋಜನೆ ಸಾಕಾರಗೊಳ್ಳದಿರಲು ಇಲ್ಲಿ ನೆಲದಡಿ ಇರುವ ಬಂಡೆಕಲ್ಲುಗಳಂತಹ ಭೌಗೋಳಿಕ ಸಮಸ್ಯೆಯೇ ಕಾರಣ, ಸದ್ಯ ಈ ಯೋಜನೆಗಾಗಿ ಎರಡೂವರೆಯಿಂದ ಮೂರು ಕೋಟಿ ರೂ. ಅನುದಾನ ಅಗತ್ಯ ಬೀಳಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಿದ್ದರೂ ಈ ಸಮಸ್ಯೆ ಬಗ್ಗೆ ಹರಿಯಲೇಬೇಕೆಂಬ ಆಶಯದಿಂದ ಎಲ್ಲರ ಸಮ್ಮುಖದಲ್ಲಿ ಸಭೆ ನಡೆಸಲಾಗುತ್ತಿದೆ. ಒಳಚರಂಡಿ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದೆಂದು ತಿಳಿಸಿದರು.
ಮಾಜಿ ಕಾರ್ಪೊರೇಟರ್ ಜಗದೀಶ್ ಶೆಟ್ಟಿ ಬೋಳೂರು, ಪಾಲಿಕೆ ಉಪ ಆಯುಕ್ತರಾದ ನರೇಶ್ ಶೆಣೈ, ಕಾರ್ಯಪಾಲ ಅಭಿಯಂತರರು ನಾಗರಾಜ್, ಸಹಾಯಕ ಕಾರ್ಯಪಾಲ ಅಭಿಯಂತರರು ಶಿವಲಿಂಗಯ್ಯ, ಸಹಾಯಕ ನಗರ ಯೋಜನಾಧಿಕಾರಿ ಗುರುಪ್ರಸಾದ್, ಕುಡ್ಸೆಂಪ್ ಅಧಿಕಾರಿಗಳಾದ ವೆಂಕಟರಮಣ, ಜಯಪ್ರಕಾಶ್ ಶಿವು ಕುಮಾರ್, ಜಾರಂದಾಯ ದೇವಸ್ಥಾನದ ಆಡಳಿತ ಮಂಡಳಿ, ಮೊಗವೀರ ಸಭಾ, ಜಯಲಕ್ಷ್ಮಿ ಫ್ರೆಂಡ್ಸ್ ಕ್ಲಬ್, ನಾರಾಯಣ ಗುರು, ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಮುಂತಾದ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.