ಗೋಕರ್ಣ: ಆತ್ಮಲಿಂಗ ಸ್ಥಾಪನೆಯಿಂದಾಗಿ ಪೌರಾಣಿಕ ಪುಣ್ಯ ಸ್ಥಳ ಗೋಕರ್ಣ. ಈ ಕ್ಷೇತ್ರದಲ್ಲಿ ಮಹಾಬಲೇಶ್ವರ ಪ್ರಧಾನ ದೈವನಾದರೂ ಅಗ್ರ ಪೂಜೆಯಲ್ಲಿ ಮಾತ್ರ ಮಹಾಗಣಪನಿಗೆ ಪ್ರಥಮಾದ್ಯತೆ. ಆತ್ಮಲಿಂಗ ಪ್ರತಿಷ್ಠಾಪನೆಯ ನಂತರ ಸ್ವಯಂ ಪರಶಿವನೇ ಈ ಕಟ್ಟಳೆ ವಿಧಿಸಿದ ಎನ್ನುವುದನ್ನು ಕ್ಷೇತ್ರ ಪುರಾಣ ಸಾರುತ್ತಿದೆ. ತನಗಿಂತ ಮೊದಲು ಗಣಪನಿಗೆ ಪೂಜೆ ಸಲ್ಲಿಸತಕ್ಕದ್ದು ಎನ್ನುವುದು ಶಿವನಾಣತಿ!. ಹೀಗಾಗಿ ಆತ್ಮಲಿಂಗ ಪೂಜೆಗಿಂತ ಮೊದಲು ಸನಿಹದಲ್ಲಿಯೇ ನಿಂತ ನಿಲುವಿನಲ್ಲಿರುವ ದ್ವಿಭುಜ ಮಹಾಗಣಪನಿಗೆ ಅಗ್ರಪೂಜೆ ಮಾಡುವ ಸಂಪ್ರದಾಯ ಅನಾದಿಯಿಂದ ಸಾಗಿ ಬಂದಿದೆ.
ಕ್ಷೀಣಿಸುತ್ತಿದ್ದಾನೆ ಮಹಾಗಣೇಶ
ವಟುರೂಪಿಯಾಗಿ ಆತ್ಮಲಿಂಗ ಸ್ಥಾಪನೆಗೆ ಕಾರಣನಾದ ದ್ವಿಭುಜ ಗಣಪತಿ ಕ್ರಿ.ಶ ಪೂರ್ವ 1ನೇ ಶತಮಾನಕ್ಕೆ ಸೇರಿದವನೆಂಬುದು ಪುರಾತತ್ವ ತಜ್ಞರ ಸಂಶೋಧನೆ ದಾಖಲಿಸಿದೆ. ಅಪರೂಪದ ಶಿವಾಲಿಕ್ ಶಿಲಾ ವರ್ಗಕ್ಕೆ ಒಳಪಟ್ಟ ಈ ಮೂರ್ತಿ ಕಳೆದ ಎರಡು ಸಾವಿರಕ್ಕೂ ಅಧಿಕ ವರ್ಷಗಳಿಂದ ಭಕ್ತರ ಭಕ್ತಿ ಆವೇಶದ ಜಲ ಮತ್ತು ಇನ್ನಿತರ ಅಭಿಷೇಕ ಪೂಜೆಗೆ ನೆನೆ-ನೆನೆದು ಕ್ಷೀಣಿಸುತ್ತಿದ್ದಾನೆ. ವಿವಿಧ ಅಂಗಗಳು ಮುಕ್ಕಾಗಿರುವುದನ್ನು ಮೇಲ್ನೋಟಕ್ಕೆ ಕಾಣಬಹುದಾಗಿದೆ. ಇದಕ್ಕೆ ಇವತ್ತಿನ ರಾಸಾಯನಿಕ ಯುಕ್ತ ಸಿಂಧೂರ, ಕುಂಕುಮ, ಜೇನು ಮತ್ತು ಬೆಲ್ಲವನ್ನು ಎಗ್ಗಿಲ್ಲದೆ ಈ ಅಪೂರ್ವ ಮೂರ್ತಿಯ ಮೇಲೆ ನಿತ್ಯ ಸುರಿದು ಸಂಭ್ರಮಿಸುತ್ತಿರುವುದು ಹಿನ್ನೆಲೆ. ಜಲ ಸೇರಿ ಈ ಬಗೆಯ ಎಲ್ಲ ವಸ್ತುಗಳನ್ನು ಗಣಪನ ಪೂಜೆಗೆ ನಿಷೇಧಿಸಬೇಕು ಎನ್ನುವುದನ್ನು ಕೆಲ ದಶಕಗಳ ಹಿಂದೆಯೇ ಪ್ರಾಚ್ಯವಸ್ತು ಇಲಾಖೆ ತನ್ನ ವರದಿಯಲ್ಲಿ ಉಲ್ಲೇಖಿಸಿ ಪಾದಕ್ಕೆ ಮಾತ್ರ ಜಲವನ್ನಷ್ಟೇ ಅರ್ಪಿಸಲು ಸೂಚಿಸಿದೆ. ಆದರೂ ಭಕ್ತಿಭಾವದ ಆವೇಶದಲ್ಲಿ ಎಲ್ಲವೂ ಹಿಂದಿನಂತೆ ಮುಂದುವರಿದಿದೆ. ಭಾದ್ರಪದ ಚೌತಿಯಂದು ಈ ಮಹಾಗಣಪತಿಗೆ ಅಪಾರ ಭಕ್ತರಿಂದ ಅವಿರತ ಪೂಜೆ ಮತ್ತು ಬಗೆ ಬಗೆಯ ಖಾದ್ಯಗಳ ನೈವೇದ್ಯ ನಡೆಯುತ್ತದೆ. ಸಂಜೆ ಮಂದಿರದ ಅರ್ಚಕರಿಂದ ಮಹಾಪೂಜೆ ಮತ್ತು ಸರ್ವಾಲಂಕಾರ ನಡೆದು ಮಹಾಮಂಗಳಾರತಿ ನೆರವೇರುವುದು ಇಲ್ಲಿನ ಪಾರಂಪರಿಕ ಕಟ್ಟಳೆ.
ಎಲ್ಲೆಡೆ ವಿನಾಯಕ
ಆತ್ಮಲಿಂಗ ಸಾನ್ನಿಧ್ಯದಿಂದಾಗಿ ಈ ಕ್ಷೇತ್ರದ ವಿವಿಧೆಡೆಗಳಲ್ಲಿ ಪುರಾಣ ಪುರಷರಿಂದ ಸ್ಥಾಪಿಸಲ್ಪಟ್ಟ ವಿವಿಧ ಗಣಪತಿಗಳನ್ನು ಇವತ್ತೂ ಪೂಜಿಸಲಾಗುತ್ತದೆ. ಇವುಗಳಲ್ಲಿ ಕೋಟಿತೀರ್ಥದಲ್ಲಿ ದೇವತೆಗಳಿಂದ ಆತ್ಮಲಿಂಗ ಪ್ರತಿಷ್ಠಾಪನೆಗೆ ಮುನ್ನ ಪೂಜಿಸಲ್ಪಟ್ಟ ಪಟ್ಟವಿನಾಯಕ ಪ್ರಮುಖನಾಗಿದ್ದಾನೆ. ಈತ ದ್ವಿಭುಜ ಮಹಾಗಣಪತಿಗಿಂತ ಮೊದಲೇ ಬಂದವ. ಕುಳಿತ ಭಂಗಿಯಲ್ಲಿರುವ ಈ ಗಣೇಶನಿಗೆ ಆತ್ಮಲಿಂಗ ಸ್ಥಾಪನೆಯ ಪಟ್ಟ ಕಟ್ಟಿ ಪಟ್ಟವಿನಾಯಕ ಎಂದು ಪೂಜೆ ಸಮರ್ಪಿಸಲಾಯಿತು ಎನ್ನುವ ಉಲ್ಲೇಖ ಪುರಾಣದಲ್ಲಿದೆ. ಇದರೊಂದಿಗೆ ರಥಬೀದಿಯಲ್ಲಿ ಮಾರ್ಕಾಂಡೇಯ ಮುನಿವರರಿಂದ ಸ್ಥಾಪಿತನಾದ ವನವಿನಾಯಕ, ಮಹಾಬಲೇಶ್ವರ ಆತ್ಮಲಿಂಗದ ನಂದಿಗೃಹದಲ್ಲಿನ ಚಿಂತಾಮಣಿ ಗಣಪ, ಕೋಟಿತೀರ್ಥದಲ್ಲಿನ ತೀರ್ಥಗಣಪ, ಕೇತಕಿ ವಿನಾಯಕ ಹೀಗೆ ವಿವಿಧ ಗಣಪತಿಯನ್ನು ಗಣೇಶ ಹಬ್ಬದಲ್ಲಿ ಶ್ರದ್ಧಾಭಕ್ತಿಯಿಂದ ವಿಶೇಷವಾಗಿ ಆರಾಧಿಸುವುದು ಕ್ಷೇತ್ರದ ಸಂಪ್ರದಾಯವಾಗಿದೆ.ಗಣೇಶನ ಮೇಲಿನ ವಿಶೇಷ ಆಸ್ಥೆಯಿಂದಾಗಿ ಇಲ್ಲಿನ 2000ಕ್ಕೂ ಹೆಚ್ಚು ಮನೆಗಳಲ್ಲಿ ಮಣ್ಣಿನ ಗಣೇಶನನ್ನು ಸ್ಥಾಪಿಸಿ ನಾಲ್ಕು ದಿನ ಪರ್ಯಂತ ವಿವಿಧ ಅರ್ಚನೆ ಸಲ್ಲಿಸುವ ರೂಢಿ ಬೆಳೆದು ಬಂದಿದೆ. ಈ ವರ್ಷ ಸೆ. 19ರಿಂದ 22ರ ತನಕ ಮೂರ್ತಿಯನ್ನು ಮನೆಯಲ್ಲಿ ಪೂಜಿಸಿ ಕೊನೆಯ ದಿನ ಸಾಮೂಹಿಕವಾಗಿ ಸಮುದ್ರಕ್ಕೆ ಸಮರ್ಪಿಸಲಾಗುತ್ತದೆ.