ಗೋಣಿಕೊಪ್ಪಲು: ರಾಜ್ಯ ವನ್ಯಜೀವಿ ಘಟಕಗಳಲ್ಲಿ ಹೊರಗುತ್ತಿಗೆಯಲ್ಲಿ 25 ವರ್ಷಗಳಿಂದ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದು, ಹೊರಗುತ್ತಿಗೆ ಪದ್ಧತಿಯಿಂದ ಮುಕ್ತಿ ನೀಡದ ಹಾಗೂ ಸೇವಾ ಭಧ್ರತೆ ಒದಗಿಸದ ಹಿನ್ನೆಲೆಯಲ್ಲಿ ದಿನಗೂಲಿ ನೌಕರರು ರಾಜ್ಯಾದ್ಯಾದಂತ ಏಕಕಾಲದಲ್ಲಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಂಡಿದ್ದಾರೆ.
ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿದ್ದ ದಿನಗೂಲಿ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ದಿನಗೂಲಿ ನೌಕರರ ಬೇಡಿಕೆಗಳು ಸರ್ಕಾರದ ಮುಂದಿದ್ದರೂ ಇಲ್ಲಿಯತನಕ ಸಮಸ್ಯೆಗೆ ಪರಿಹಾರ ಲಭಿಸಿಲ್ಲ. ಇದೀಗ ಅನಿವಾರ್ಯವಾಗಿ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರ ಗಮನ ಸೆಳೆಯುವ ಸಲುವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು. ಈಗಾಗಲೇ ರಾಜ್ಯದ ಹಲವು ವಲಯಗಳಿಗೆ ಭೇಟಿ ನೀಡಿ ದಿನಗೂಲಿ ನೌಕರರ ಅಹವಾಲುಗಳನ್ನು ಸ್ವೀಕರಿಸಲಾಗಿದೆ ಎಂದರು.
ಏಕಕಾಲದಲ್ಲಿ ನೌಕರರು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸುವುದರಿಂದ ಸರ್ಕಾರದ ಗಮನ ಸೆಳೆಯಬಹುದಾಗಿದೆ. ಇದರಿಂದಾಗಿ ಪ್ರತಿಭಟನೆ ಸಾಧ್ಯವಾಗಲಿದೆ. ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸುವ ಅವಕಾಶವಿದ್ದು, ಆ ನಿಟ್ಟಿನಲ್ಲಿ ಎಲ್ಲ ನೌಕರರು ಸಂಘದ ತೀರ್ಮಾನಗಳಿಗೆ ಬದ್ಧರಾಗಿ ಕೆಲಸ ನಿರ್ವಹಿಸುವಂತೆ ಕರೆ ನೀಡಿದರು.
ದಿನಗೂಲಿ ನೌಕರರು ಮುಂದಿನ ದಿನದಲ್ಲಿ ತಮ್ಮ ಸೇವಾ ಭದ್ರತೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯ ಗೌರವಾಧ್ಯಕ್ಷ ಎ.ಎಂ.ನಾಗರಾಜ್ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಶ್ರೀಮಂಗಲ, ಮಾಕುಟ್ಟ, ಭಾಗಮಂಡಲ, ನಾಗರಹೊಳೆ ಹಾಗೂ ಪುಷ್ಪಗಿರಿ ಸೇರಿದಂತೆ ವಿವಿಧ ವಲಯಗಳ ದಿನಗೂಲಿ ನೌಕರರು ಹಾಜರಿದ್ದರು.