ಜಿಲ್ಲೆ

50 ಅಧಿಕಾರಿಗಳು, ಸಿಬ್ಬಂದಿಯಿಂದು ಏಕಕಾಲಕ್ಕೆ ರೇಡ್

ಆರ್.ಕೃಷ್ಣ

ಮೈಸೂರು: ರಾಜ್ಯಾದ್ಯಂತ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ನಗರದ ಮೂವರು ಉದ್ಯಮಿಗಳು ಸೇರಿದ್ದಾರೆ.

ಐವತ್ತು ಜನರ ಅಧಿಕಾರಿ, ಸಿಬ್ಬಂದಿ ತಂಡ ಹತ್ತು ಕಾರುಗಳಲ್ಲಿ ಮೂವರು ಉದ್ಯಮಿಗಳ ಮನೆ, ಅವರಿಗೆ ಸಂಬಂಧಿಸಿದ ಕಚೇರಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದರು.

ಬುಧವಾರ ಮುಂಜಾನೆಯೇ ಉದ್ಯಮಿಗಳಾದ ಜಯಕೃಷ್ಣ, ಕಾಂತರಾಜು, ರಮೇಶ್ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಉದ್ಯಮಿಗಳಲ್ಲಿ ಒಬ್ಬರು ಸ್ಥಳೀಯ ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಆದಾಯ ತೆರಿಗೆ ಪಾವತಿ ಮಾಡದ ಕಾರಣದಿಂದ ಐಟಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ರಾಮಕೃಷ್ಣನಗರದಲ್ಲಿರುವ ಉದ್ಯಮಿ ಜಯಕೃಷ್ಣ, ಇಟ್ಟಿಗೆ ಕಾರ್ಖಾನೆ ಮಾಲೀಕರಾಗಿರುವುದಲ್ಲದೇ ಸರ್ಕಾರಿ ಕೆಲಸದ ಸಿವಿಲ್ ಗುತ್ತಿಗೆದಾರರಾಗಿದ್ದಾರೆ.

ಬನ್ನೂರು ರಿಂಗ್ ರಸ್ತೆಯ ದೇವೇಗೌಡ ವೃತ್ತದ ಬಳಿ ಇರುವ ಖಾಸಗಿ ಹೋಟೆಲ್‌ನ ಮಾಲೀಕ ಉದ್ಯಮಿ ಕಾಂತರಾಜು ಅವರು ನಿಯಮ ಪಾಲಿಸಿರಲಿಲ್ಲ. ಹೀಗಾಗಿ, ಅವರ ಮನೆ ಮತ್ತು ಕಚೇರಿಯ ಮೇಲೆ ದಾಳಿಯೊಂದಿಗೆ ಹೋಟೆಲ್‌ನಲ್ಲಿಯೂ ತಪಾಸಣಾ ಕಾರ್ಯ ನಡೆದಿದೆ. ವಿಜಯನಗರ ಮೂರನೇ ಹಂತದಲ್ಲಿರುವ ಉದ್ಯಮಿ ರಮೇಶ್ ಅವರ ಮನೆ ಮತ್ತು ಕಚೇರಿಯ ಮೇಲೂ ದಾಳಿ ನಡೆಸಲಾಗಿದೆ.

ಸಂಜೆಯವರೆಗೂ ಈ ಮೂವರು ಉದ್ಯಮಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಆದಾಯ ತೆರಿಗೆ ಪಾವತಿ ಸಂಬಂಧ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.