ಚಿಕ್ಕೋಡಿ: ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಬರುವ ಆ.1ರಂದು 72 ವಸಂತಗಳನ್ನು ಪೂರೈಸಿ 73ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಂಕಲಿಯ ಡಾ.ಪ್ರಭಾಕರಣ್ಣಾ ಕೋರೆ ಹುಟ್ಟುಹಬ್ಬ ಆಚರಣಾ ಸಮಿತಿಯು ಸರಳವಾಗಿ ಕೋರೆ ಅವರ ಜನ್ಮದಿನ ಆಚರಿಸಲು ನಿರ್ಧರಿಸಿದೆ ಎಂದು ಕಾರ್ಯಾಧ್ಯಕ್ಷ ಭರತೇಶ ಬನವಣೆ ತಿಳಿಸಿದ್ದಾರೆ.
ಅಂಕಲಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿವರ್ಷ ಪ್ರಭಾಕರ ಕೋರೆ ಅವರ ಹುಟ್ಟುಹಬ್ಬವನ್ನು 3 ದಿನಗಳ ಕಾಲ ಸಮಾಜಪರ ಕಾರ್ಯಕ್ರಮಗಳೊಂದಿಗೆ ಆಚರಿಸಿಕೊಂಡು ಬರುತ್ತಿದ್ದೆವು. ಆದರೆ, ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಎಲ್ಲ ಅಂಗ ಸಂಸ್ಥೆಗಳಲ್ಲಿ ಆ.1ರಂದು ದೈಹಿಕ ಅಂತರ ಕಾಪಾಡಿಕೊಂಡು, ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಅಳವಡಿಸಿಕೊಂಡು, ಹೆಚ್ಚಿನ ಜನರನ್ನು ಸೇರಿಸದೆ ಸರಳವಾಗಿ ಆಚರಿಸಲು ಸಮಿತಿ ತೀರ್ಮಾನಿಸಿದೆ ಎಂದು ತಿಳಿಸಿದರು.
ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಬೆಳಗಾವಿ, ಚಿಕ್ಕೋಡಿ ಹಾಗೂ ಕೆಎಲ್‌ಇ ಸಂಸ್ಥೆಯ ಹೋಮಿಯೋಪಥಿಕ್ ಕಾಲೇಜು ಸಹಯೋಗದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಆ.1ರಂದು ಬೆಳಗ್ಗೆ 9.30ಕ್ಕೆ ಸಸಿ ನೆಡುವ ಕಾರ್ಯಕ್ರಮ ಎಲ್ಲ ಅಂಗ ಸಂಸ್ಥೆಗಳಲ್ಲಿ ಪ್ರತ್ಯೇಕವಾಗಿ ಬೆಳಗ್ಗೆ 10ಕ್ಕೆ ನೆರವೇರಲಿದೆ.
ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಗ್ರಾಹಕ ಇಂಧನ ಕೇಂದ್ರ(ಡೀಸೆಲ್ ಪಂಪ್) ಉದ್ಘಾಟನೆ ನೆರವೇರಲಿದೆ. ಬೆಳಗ್ಗೆ 11ಕ್ಕೆ ಅಂಕಲಿ ಶಿವಾಲಯ ಹಾಗೂ ಕೆಎಲ್‌ಇ ಅಂಗ ಸಂಸ್ಥೆಯ ಅಂಕಲಿ ಆವರಣದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಹೋಮಿಯೋಪಥಿಕ್ ಮಾತ್ರೆ, ಸ್ಯಾನಿಟೈಸರ್, ಮಾಸ್ಕ್ ವಿತರಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ. ಆರ್ಸೇನಿಕ್ ಆಲ್ಬಂ-30 ಮಾತ್ರೆ ವಿತರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಲಾಗುವುದು. 1 ಲಕ್ಷ ಜನರಿಗೆ ಆಯಾ ಗ್ರಾಮಗಳಲ್ಲಿ ಕಾರ್ಖಾನೆಯ ಸಿಬ್ಬಂದಿ ಮೂಲಕ ಮಾತ್ರೆ ವಿತರಣೆ ನಡೆಯಲಿದೆ ಎಂದರು.
ಅಂಕಲಿಯ ಡಾ. ಪ್ರಭಾಕರ ಅಣ್ಣಾ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿ. ಅಂಕಲಿ ವತಿಯಿಂದ 10,000 ಜನರಿಗೆ ಮಾಸ್ಕ್ ಹಾಗೂ ಶಿವಶಕ್ತಿ ಶುಗರ್ಸ್, ಸೌಂದತ್ತಿ ಹಾಗೂ ಹರ್ಮ್ಸ್ ಡಿಸ್ಟಿಲರಿ ಪ್ರಾ.ಲಿ., ಯಡ್ರಾಂವ ಇವರಿಂದ 20,000 ಕಬ್ಬು ಪೂರೈಕೆದಾರರು ಹಾಗೂ ಬಡಜನರಿಗೆ ಸ್ಯಾನಿಟೈಸರ್ ವಿತರಿಸಲಾಗುವುದು. ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಕಬ್ಬು ಪೂರೈಸಿದ 20,000 ರೈತ ಸದಸ್ಯರಿಗೆ ಮತ್ತು ಬಡ ಜನರಿಗೆ ಸ್ಯಾನಿಟೈಸರ್ ವಿತರಣೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಬಿ.ಆರ್. ಪಾಟೀಲ, ಸಂದೀಪ ಪಾಟೀಲ, ಮಹಾಂತೇಶ ಪಾಟೀಲ, ಅಜಿತ ದೇಸಾಯಿ, ಅಣ್ಣಾಸಾಹೇಬ ಪಾಟೀಲ, ಬಿ.ಎ. ಪಾಟೀಲ, ಡಿ.ಎಸ್. ಕರೋಶಿ, ಆರ್.ಟಿ.ದೇಸಾಯಿ, ಶಿವಾನಂದ ಇದ್ದರು.