ಬೆಂಗಳೂರು: ನಮ್ಮ ಮೆಟ್ರೋ ಇಂಟರ್ಜೇಂಜ್ ನಿಲ್ದಾಣವಾಗಿರುವ ನಾಡಪ್ರಭು ಕೆಂಪೇಗೌಡ (ಮೆಜೆಸ್ಟಿಕ್) ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೆಲಕ್ಕೆ ಸ್ಟಿಕರ್ ಮಾದರಿಯ ಗುರುತುಗಳನ್ನು ಅಂಟಿಸಲಾಗಿದೆ. ಹಸಿರು ಹಾಗೂ ನೇರಳೆ ಮಾರ್ಗದ ಕೊನೆಯ ನಿಲ್ದಾಣಗಳ ಹೆಸರನ್ನು ಸ್ಟಿಕರ್ ಮೇಲೆ ಬರೆಯಲಾಗಿದ್ದು, ಪಾದದ ಗುರುತಿನ ಈ ಸ್ಟಿಕರ್ಗಳನ್ನು ಅನುಸರಿಸಿ ಉದ್ದೇಶಿತ ಪ್ಲಾಟ್ಫಾರ್ಮ್ಗೆ ಸುಲಭವಾಗಿ ತೆರಳಬಹುದು. ಜತೆಗೆ ಹಳೇ ಡಿಜಿಟಲ್ ಫಲಕಗಳನ್ನೂ ಉಳಿಸಿಕೊಳ್ಳಲಾಗಿದೆ.
ಸಂಸದರಾದ ಪಿ.ಸಿ. ಮೋಹನ್ ಹಾಗೂ ತೇಜಸ್ವಿ ಸೂರ್ಯ ಇತ್ತೀಚೆಗೆ ಮೆಜೆಸ್ಟಿಕ್ ನಿಲ್ದಾಣಕ್ಕೆ ಭೇಟಿ ನೀಡಿದ್ದ ವೇಳೆ ಸಮಸ್ಯೆಯ ಕುರಿತು ಬಿಎಂಆರ್ಸಿಎಲ್ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ವೇಳೆ ಬಿಎಂಆರ್ಸಿಎಲ್ ಅಧಿಕಾರಿಗಳು ಸೂಚನಾ ಲಕಗಳನ್ನು ಬದಲಾಯಿಸುವ ಬಗ್ಗೆ ಅಧ್ಯಯನ ನಡೆಸಿ ಕ್ರಮಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದರು.
ನಂತರ ಬಿಎಂಆರ್ಸಿಎಲ್ ತಜ್ಞರ ತಂಡ ಪ್ರಯಾಣಿಕರಿಗೆ ಆಗುತ್ತಿರುವ ಗೊಂದಲ ಬಗೆಹರಿಸಲು ಮುಂದಿರುವ ಮಾಗೋರ್ಪಾಯಗಳ ಬಗ್ಗೆ ಅಧ್ಯಯನ ನಡೆಸಿದ್ದರು. ಬಳಿಕ ಸ್ಟಿಕರ್ ಅಂಟಿಸುವ ಮೂಲಕ ಸರಳೀಕೃತ ಮಾರ್ಗಸೂಚಿಗಳನ್ನು ಅಳವಡಿಸಿದ್ದಾರೆ.
ಜನದಟ್ಟಣೆ ಹೆಚ್ಚಿದ್ದ ಸಂದರ್ಭದಲ್ಲಿ ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಎಲ್ಲಿ ಹೋಗಬೇಕು, ಎಲ್ಲಿ ಬರಬೇಕು ಎಂಬ ಬಗ್ಗೆ ಸುಲಭವಾಗಿ ತಿಳಿಯುತ್ತಿರಲಿಲ್ಲ. ಇದೀಗ ಸರಳವಾದ ಸೂಚನೆಗಳನ್ನು ಅಳವಡಿಸಲಾಗಿದೆ. ಇದು ಹಿರಿಯ ನಾಗರಿಕರಿಗೆ ಹೆಚ್ಚು ಉಪಕಾರಿಯಾಗಿವೆ ಎಂದು ಸಾಮಾಜಿಕ ಜಾಲತಾಣ 'ಎಕ್ಸ್' ವೇದಿಕೆಯಲ್ಲಿ ಮೆಟ್ರೋ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.