ಜಿಲ್ಲೆ

ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯ ಚಪ್ಪಲಿಯಲ್ಲಿ ಸಿಮ್‌ಕಾರ್ಡ್ ಪತ್ತೆ!

ಮೈಸೂರು: ನಗರದ ಕೇಂದ್ರ ಕಾರಾಗೃಹಕ್ಕೆ ದಾಖಲಿಸಲು ಕರೆತಂದ ವಿಚಾರಣಾಧೀನ ಕೈದಿಯ ಚಪ್ಪಲಿಯಲ್ಲಿ ಒಂದು ಸಿಮ್ ಕಾರ್ಡ್ ಹಾಗೂ ಮೆಮೋರಿ ಕಾರ್ಡ್ ಮತ್ತು ಪ್ಯಾಂಟ್ ಒಳಜೇಬಿನಲ್ಲಿ ಒಂದು ಸಿಮ್‌ಕಾರ್ಡ್ ಪತ್ತೆಯಾಗಿದೆ.

ದರೋಡೆ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದ ವಿಚಾರಣಾಧೀನ ಕೈದಿ ಕಿರಣ್‌ನನ್ನು ಇತ್ತೀಚೆಗೆ ಕೇಂದ್ರ ಕಾರಾಗೃಹಕ್ಕೆ ದಾಖಲಿಸುವ ವೇಳೆ ಮುಖ್ಯಗೇಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದಾಗ ಈ ವಸ್ತುಗಳು ಪತ್ತೆಯಾಗಿವೆ.

ತಾನು ಧರಿಸಿದ್ದ ಚಪ್ಪಲಿಯ ಹೊಲಿಗೆಯನ್ನು ಬಿಡಿಸಿ ನಂತರ ಸಿಮ್ ಕಾರ್ಡ್ ಹಾಗೂ ಮೆಮೋರಿ ಕಾರ್ಡ್ ಇಟ್ಟು ನಂತರ ಹೊಲಿಗೆ ಹಾಕಿಕೊಂಡು ಕಾರಾಗೃಹ ಪ್ರವೇಶಿಸಲು ಮುಂದಾಗಿದ್ದ.

ಲಷ್ಕರ್ ಪೊಲೀಸ್ ಠಾಣೆಯಲ್ಲಿ ಕಿರಣ್ ವಿರುದ್ಧ ದರೋಡೆ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಲಷ್ಕರ್ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಲಾಗಿತ್ತು.

ಕಾರಾಗೃಹ ಪೊಲೀಸರು ಈ ಸಂಬಂಧ ಕಿರಣ್ ವಿರುದ್ಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.