ಗಂಗೊಳ್ಳಿ: ವ್ಯಾಪಾರ, ವ್ಯವಹಾರ ಹಾಗೂ ವ್ಯವಾಹಾರಿಕ ಕೆಲಸದ ಜತೆಗೆ ಆಧ್ಯಾತ್ಮಿಕ ಕೆಲಸದ ಸಂಬಂಧ ಮನುಷ್ಯನಿಗೆ ಅವಶ್ಯಕ. ಆಧ್ಯಾತ್ಮಿಕ ಕಾರ್ಯದಿಂದ ಜೀವನ ಉದ್ಧಾರಕ್ಕೆ ಬೇಕಾದ ಶಕ್ತಿ, ಪುಣ್ಯ ಪ್ರಾಪ್ತವಾಗುದರ ಜತೆಗೆ ಭಗವಂತನ ಕೃಪೆ ಅವಶ್ಯಕ. ಭಗವಂತನ ಸೇವೆಯಿಂದ ಜೀವನ ಸಾರ್ಥಕ ಎಂದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿ ಹೇಳಿದರು.
ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದಲ್ಲಿ ಬುಧವಾರ ನಾಗದೇವರ ಜೀರ್ಣಾಷ್ಟಬಂಧ ಪುರಃಸರ ಪುನಃ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ದೇವರಿಗೆ ಬ್ರಹ್ಮಕಲಶಾಭಿಷೇಕ ನೆರವೇರಿಸಿ, ನಾಗದೇವರಿಗೆ ಬೆಳ್ಳಿ ಪ್ರಭಾವಳಿ ಮತ್ತು ಪೀಠ ಸಮರ್ಪಣೆ ಮಾಡಿ ಆಶೀರ್ವಚನ ನೀಡಿ ಮಾತನಾಡಿದರು.
ಬುಧವಾರ ಬೆಳಗ್ಗೆ ಅಷ್ಟಬಂಧ ಪುರಃಸರ ಶ್ರೀ ನಾಗ ದೇವರ ಪ್ರತಿಷ್ಠಾಪನೆ, ಜೀವಕುಂಭಾಭಿಷೇಕ, ಪ್ರತಿಷ್ಠಾಪನೆ ಕಲಶಾಭಿಷೇಕ, ಕಲಶಾಧಿವಾಸ ಹೋಮ, ತತ್ವಹೋಮ, ಪ್ರಾಯಶ್ಚಿತ್ತ ಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಪ್ರಧಾನ ತಂತ್ರಿ ಬಲರಾಮ ಸೋಮಯಾಜಿ ಕೋಟ ಹಾಗೂ ಪ್ರಧಾನ ಪುರೋಹಿತ ರಾಘವೇಂದ್ರ ಅಡಿಗ ನಾಯಕವಾಡಿ ಮತ್ತು ವೈದಿಕರಿಂದ ನೆರವೇರಿತು. ಅರ್ಚಕ ಉಮೇಶ ಎಲ್.ಮೇಸ್ತ, ಕಾರ್ಯದರ್ಶಿ ಶ್ರೀಧರ ಪಿ.ಮೇಸ್ತ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಗಣಪತಿ ವಿ.ಮೇಸ್ತ, ಕಾರ್ಯದರ್ಶಿ ರಾಘವೇಂದ್ರ ವಿ.ಮೇಸ್ತ, ಸೇವಾ ಸಮಿತಿ ಸದಸ್ಯರು, ಸುವರ್ಣ ಮಹೋತ್ಸವ ಸಮಿತಿ ಸದಸ್ಯರು, ಮಹಿಳಾ ಮಂಡಳಿ ಸದಸ್ಯರು, ಭಕ್ತರು, ಚಾರೋಡಿ ಮೇಸ್ತ ಮೊದಲಾದವರು ಉಪಸ್ಥಿತರಿದ್ದರು. ಉಮೇಶ್ ಮೇಸ್ತ ಸ್ವಾಗತಿಸಿದರು. ರಾಘವೇಂದ್ರ ವಿ.ಕೆ. ಕಾರ್ಯಕ್ರಮ ನಿರ್ವಹಿಸಿದರು.
ಜೀವನದಲ್ಲಿ ಆಧ್ಯಾತ್ಮಿಕ ಸಂಬಂಧದಿಂದ ಜೀವನ ಉದ್ಧಾರ, ಸಾರ್ಥಕವಾಗುತ್ತದೆ. ಮಕ್ಕಳಿಗೆ ನಮ್ಮ ಸಂಸ್ಕಾರ ಕೊಟ್ಟು, ಹಿಂದಿನವರು ತೋರಿಸಿಕೊಟ್ಟ ಮಾರ್ಗದಲ್ಲಿ ನಡೆಸಿದಾಗ ಜೀವನದಲ್ಲಿ ಉನ್ನತಿ ಸಾಧ್ಯ. ಎಷ್ಟೇ ಕೆಲಸ, ವ್ಯವಹಾರ ಇದ್ದರೂ ದೇವರ ಆರಾಧನೆ ಬಿಡಬಾರದು. ಶ್ರದ್ಧಾ ಭಕ್ತಿಯಿಂದ ಚಾರೋಡಿ ಮೇಸ್ತ ಸಮಾಜದವರು ದೇವಸ್ಥಾನದಲ್ಲಿ ವಿಶೇಷ ಸೇವೆ ಮಾಡಿಕೊಂಡು ಬಂದಿರುವುದು ಸಂತೋಷ. ನಾಗ ದೇವರ ಆರಾಧನೆ ಪದ್ಧತಿ ಹಿಂದಿನವರು ಪ್ರಾರಂಭ ಮಾಡಿ ಶ್ರದ್ಧಾ ಭಕ್ತಿಯಿಂದ ಅನುಸರಿಸಿಕೊಂಡು ಬಂದಿದ್ದು, ದೇವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. -ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ https://www.vijayavani.net/nagaraj-kharvi-elected-as-president https://www.vijayavani.net/equal-opportunities-for-special-children