ಮಂಗಳೂರು: ಕೋವಿಡ್ ವಿರುದ್ಧ ಹೋರಾಡುವವರಿಗಾಗಿ ಸುರತ್ಕಲ್ ಎನ್‌ಐಟಿಕೆ ತಜ್ಞರು ಹಗುರ ಸಿಲ್ವರ್ ನ್ಯಾನೊ ಕೋಟೆಡ್ ಮುಖಕವಚ ಅಭಿವೃದ್ಧಿಪಡಿಸಿದ್ದಾರೆ.
ಇದನ್ನು ಸೋಪ್‌ವಾಟರ್ ಮೂಲಕ ಶುಚಿಗೊಳಿಸಿ ಮರುಬಳಕೆ ಮಾಡಬಹುದು. ಕೋವಿಡ್ ಮಾತ್ರವಲ್ಲ, ಅದೇ ರೀತಿಯ ಸಾಂಕ್ರಾಮಿಕ ರೋಗಗಳಿಂದಲೂ ರಕ್ಷಣೆ ಪಡೆಯಬಹುದು.
ಇದನ್ನು ಧರಿಸುವುದು ಸುಲಭ. ಹಣೆಯಿಂದ ಕುತ್ತಿಗೆವರೆಗೂ 100 ಮೈಕ್ರಾನ್‌ನಷ್ಟು ತೆಳುವಾದ ಪ್ಲಾಸ್ಟಿಕ್ ಹಾಳೆಯ ಕವಚ 180 ಡಿಗ್ರಿ ಸುರಕ್ಷತೆ ನೀಡುತ್ತದೆ. ಕೋವಿಡ್ ಸೋಂಕಿತರು ಕೆಮ್ಮುವಾಗ, ಸೀನುವಾಗ ಗಾಳಿಗೆ ಹರಡುವ ಗಂಟಲ ದ್ರವದ ಹನಿಗಳು, ಇತರ ಸಿಂಪಡಣೆ ಅಥವಾ ಯಾವುದೇ ರೀತಿಯ ಸೋಂಕುಗಳ ವಿರುದ್ಧ ರಕ್ಷಣೆ ನೀಡುತ್ತದೆ. ಈ ಪ್ಲಾಸ್ಟಿಕ್ ಶೀಟನ್ನು ಸ್ಟೈರೋಫೋಮ್‌ನ ಪಟ್ಟಿಗೆ ಅಳವಡಿಸಲಾಗಿದ್ದು, ಇದು ಬಹಳ ಹಗುರ. ಈ ಸ್ಟೈರೋಫೋಮ್ ಪಟ್ಟಿ ಹಣೆಯ ಮೇಲೆ ಧರಿಸಿಕೊಂಡಾಗ ಬೆವರು ಮತ್ತಿತರ ಕಾರಣದಿಂದ ಬ್ಯಾಕ್ಟೀರಿಯಾ ಇತ್ಯಾದಿ ಬಾರದಂತೆ ರಕ್ಷಣೆಗಾಗಿ ಅದಕ್ಕೆ ಸಿಲ್ವರ್ ನ್ಯಾನೊಕೋಟಿಂಗ್ ನೀಡಲಾಗಿದೆ. ಅಂತಹ ಬ್ಯಾಕ್ಟೀರಿಯಾ ಮತ್ತಿತರ ಶಿಲೀಂಧ್ರಗಳನ್ನು ಸಿಲ್ವರ್ ನ್ಯಾನೊಕೋಟಿಂಗ್ ನಾಶಪಡಿಸುತ್ತದೆ.
500 ಮುಖಕವಚ ತಯಾರಿ ಮಾರುಕಟ್ಟೆಯಲ್ಲಿರುವ ಇತರ ಮಾದರಿಗಳು ಇಲಾಸ್ಟಿಕ್ ಹೊಂದಿವೆ, ಎನ್‌ಐಟಿಕೆಯಲ್ಲಿ ಅದಕ್ಕೆ ವೆಲ್‌ಕ್ರೋ ಬಳಸಲಾಗಿದೆ. ತಲೆಯ ಗಾತ್ರ ಹೆಚ್ಚು ಕಡಿಮೆ ಇದ್ದರೂ ಹೊಂದಿಸಿಕೊಂಡು ಬಳಸುವುದು ಸುಲಭ. ಎನ್‌ಐಟಿಕೆಯ ಸ್ಟಾರ್ಟ್‌ಅಪ್ ಕೇಂದ್ರದಲ್ಲಿ, ಸೈನ್ಸ್ ಆ್ಯಂಡ್ ಟೆಕ್ನಾಲಜಿ ಎಂಟರ್‌ಪ್ರೆನ್ಯುರ್ಸ್ ಪಾರ್ಕ್(ಸ್ಟೆಪ್) ಈ ಫೇಸ್ ಶೀಲ್ಡ್ ಅಭಿವೃದ್ಧಿಪಡಿಸಿದೆ. ಎನ್‌ಐಟಿಕೆ ಉಪನ್ಯಾಸಕ ಹಾಗೂ ಸಂಶೋಧಕ ಡಾ.ಅರುಣ್ ಇಸ್ಲೂರು ನೇತೃತ್ವದ ತಂಡ ಇದನ್ನು ರೂಪಿಸಿದೆ. ಇದುವರೆಗೆ 500 ಮುಖಕವಚಗಳನ್ನು ತಯಾರಿಸಲಾಗಿದೆ.
ಮಂಗಳೂರಿನ ಅನೇಕ ವೈದ್ಯರು, ಮುಖ್ಯವಾಗಿ ದಂತ ವೈದ್ಯರು, ಬೆಂಗಳೂರು, ಮೈಸೂರು, ಕೇರಳದ ಕೆಲವೆಡೆಗಳಿಂದ ಬೇಡಿಕೆ ಬಂದಿದೆ. ನಾವು ವಾಣಿಜ್ಯಾತ್ಮಕ ದೃಷ್ಟಿಕೋನದಿಂದ ಉತ್ಪಾದಿಸುವ ಉದ್ದೇಶವಿಲ್ಲ. ಆದಷ್ಟೂ ವಿದ್ಯಾರ್ಥಿಗಳಲ್ಲಿ ಇಂತಹ ಉತ್ಪನ್ನಗಳನ್ನು ತಯಾರಿಸಬಲ್ಲ ಧೈರ್ಯ ಮೂಡಿಸುವ ಉದ್ದೇಶ ನಮ್ಮದು. ಆದಾಯದ ಒಂದಂಶವನ್ನು ಭಾರತೀಯ ಸೇನೆಯ ನಿಧಿಗೆ ಪ್ರತಿ ಎರಡು ತಿಂಗಳಿಗೊಮ್ಮೆ ಹಸ್ತಾಂತರಿಸಲಾಗುವುದು. - ಅರುಣ್ ಇಸ್ಲೂರು, ಉಪನ್ಯಾಸಕ, ಸಂಶೋಧಕ, ಎನ್‌ಐಟಿಕೆ