ಜಿಲ್ಲೆ

ವೀರ ಯೋಧರ ತ್ಯಾಗ ಬಲಿದಾನ ಎಂದಿಗೂ ಅಮರ


ಬಸವಾಪಟ್ಟಣ: ಮಾತೃಭೂಮಿಯು ಸಂಕಷ್ಟದಲ್ಲಿದ್ದಾಗ ಸಾವಿಗೂ ಅಂಜದೆ ಹೋರಾಡಿದ ವೀರ ಯೋಧರನ್ನು ಪ್ರತಿಯೊಬ್ಬರೂ ಸ್ಮರಿಸಬೇಕಾಗಿದೆ. ಯೋಧರ ತ್ಯಾಗ, ಬಲಿದಾನಗಳು ಎಂದೆಂದಿಗೂ ಅಜರಾಮರ ಎಂದು ಚನ್ನಗಿರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಲ್.ಜಿ. ಮಧುಕುಮಾರ್ ಬಣ್ಣಿಸಿದರು.

ಬಸವಾಪಟ್ಟಣದ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯದ ರಜತ ಮಹೋತ್ಸವದಲ್ಲಿ ಮಾತನಾಡಿದರು.

1999ರ ಪಾಕ್ ವಿರುದ್ಧದ ಕಾರ್ಗಿಲ್ ಕದನವು ಭಾರತೀಯ ಮಿಲಿಟರಿ ವ್ಯವಸ್ಥೆಗೆ ಸ್ವಾಭಿಮಾನವನ್ನು ಪ್ರಶ್ನಿಸುವ ಯುದ್ಧವಾಗಿತ್ತು. ನೂರಾರು ಸೈನಿಕರು ಹುತಾತ್ಮರಾಗಿದ್ದರೂ ಅಂಜದೆ ಧೈರ್ಯದಿಂದ ಮುನ್ನುಗ್ಗಿದ ನಮ್ಮ ಯೋಧರು ದೇಶದ ಗಡಿ ಸಂರಕ್ಷಣೆ ಮಾಡಿದರು ಎಂದು ಹೇಳಿದರು.

ತಾಯಿ ನೆಲಕ್ಕೆ ಅರ್ಪಿತವಾದ ವೀರಯೋಧರ ಧೈರ್ಯ, ಸಾಹಸ, ತ್ಯಾಗ, ಬಲಿದಾನಗಳು ದೇಶದ ಸಮಗ್ರತೆ, ಸಾರ್ವಭೌಮತೆಗೆ ಧಕ್ಕೆ ಬಂದ ಸಮಯದಲ್ಲಿ ಎಲ್ಲರೂ ಒಟ್ಟಾಗಿ ನಿಲ್ಲಬೇಕು ಎಂಬ ಪಾಠ ಕಲಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಮುಖ್ಯಶಿಕ್ಷಕ ಎಂ. ಶ್ರೀಧರ್, ಶಿಕ್ಷಕರಾದ ಯುವರಾಜ್, ಮಂಜುಳಾ, ಸುಜಾತಾ, ಉಮಾಪತಿ, ಶ್ವೇತಾ, ಗಾಯತ್ರಿ, ದೀಪಾ ಇದ್ದರು.