ಜಿಲ್ಲೆ

ಸಿಲ್ವರ್ ಮರ ಬೆಳೆಯಲು ನಿರಾಸಕ್ತಿ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮಲೆನಾಡಿನ ಕಾಫಿ ತೋಟಗಳಲ್ಲಿ ಯಥೇಚ್ಛವಾಗಿ ಬೆಳೆಸಲಾಗುತ್ತಿದ್ದ ಸಿಲ್ವರ್ ಮರದ ಬಗ್ಗೆ ಬೆಳೆಗಾರರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಅರಣ್ಯ ಇಲಾಖೆಯೂ ಆಸ್ಟ್ರೇಲಿಯಾ ಮೂಲದ ಈ ಮರ ಬೆಳೆಸುವುದಕ್ಕೆ ಪ್ರೋತ್ಸಾಹ ಕೊಡುತ್ತಿಲ್ಲ. ಸಿಲ್ವರ್ ಮರದ ಋಣಾತ್ಮಕ ಅಂಶಗಳ ಬಗ್ಗೆ ರೈತರಲ್ಲಿ ಇತ್ತೀಚೆಗೆ ಜಾಗೃತಿ ಮೂಡುತ್ತಿದ್ದು, ಸ್ಥಳೀಯ ಜಾತಿಯ ಮರಗಳನ್ನು ಬೆಳೆಸಲು ಆಸಕ್ತಿ ತೋರಿಸುತ್ತಿದ್ದಾರೆ. ಕೆಲವೊಂದು ಸಂಘಟನೆಗಳೂ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
ಆಸ್ಟ್ರೇಲಿಯಾ ಮೂಲದ ಸಿಲ್ವರ್ ಓಕ್ ಎಂದು ಕರೆಯಲಾಗುವ ಸಿಲ್ವರ ಮರವನ್ನು ಭಾರತದಲ್ಲಿ ಕಾಫಿ ಗಿಡಗಳಿಗೆ ನೆರಳಿನ ಮರವಾಗಿ ತಂದು ಬೆಳೆಸಲು ಆರಂಭಿಸಿದರು. ಇದು ಅತ್ಯಂತ ವೇಗವಾಗಿ ಬೆಳೆಯುವ ಮರ. ಒಂದೊಮ್ಮೆ ಅರಣ್ಯ ಇಲಾಖೆಯಿಂದ ಸಿಲ್ವರ್ ಮರದ ನೆಡು ತೋಪು ಕೂಡ ಮಾಡಲಾಗುತ್ತಿತ್ತು. ಮಧ್ಯಮ ಗಾತ್ರದ ಎತ್ತರಕ್ಕೆ ಬೆಳೆಯುವ ನಿತ್ಯಹರಿದ್ವರ್ಣದ ಮರವಾಗಿರುವ ಸಿಲ್ವರ್ ಓಕ್ ನಸು ಕಂದು ಬಣ್ಣದ ಟಿಂಬರ್ ಹೊಂದಿದೆ. ಎಲೆಗಳ ಅಡಿಭಾಗ ಎಳೆಯ ಬೂದು ಬಣ್ಣದಲ್ಲಿದ್ದು ಹೆಚ್ಚು ಕಡಿಮೆ ಬೆಳ್ಳಿಯ ಬಣ್ಣದಲ್ಲಿ ಇರುವುದರಿಂದ ಸಿಲ್ವರ್ ಓಕ್ ಎಂದು ಕರೆಯಲಾಗುತ್ತದೆ. ಹಳದಿ ಬಣ್ಣದ ಹೂವು ಬಿಡುತ್ತದೆ.

ಕಾಫಿ ತೋಟದಲ್ಲಿ ನೆರಳಿನ ಮರವಾಗಿ ಸಿಲ್ವರ್ ಓಕ್ ಹೆಚ್ಚಾಗಿ ಬೆಳೆಯಲಾಗುತ್ತದೆ. ಇದರ ಟಿಂಬರ್‌ನಿಂದ ಸಂಗೀತ ಉಪಕರಣ, ಪೀಠೋಪಕರಣ, ಪ್ಲೈವುಡ್ ತಯಾರಿಸಲಾಗುತ್ತದೆ. ಮನೆ ನಿರ್ಮಾಣಕ್ಕೂ ಕೆಲವು ಕಡೆಗಳಲ್ಲಿ ಬಳಸುತ್ತಾರೆ. ಹಿಂದೊಮ್ಮೆ ಹೆಚ್ಚು ಬೇಡಿಕೆಯಲ್ಲಿ ಇದ್ದುದರಿಂದ ಇದನ್ನು ಅಲ್ಪಾವಧಿಯಲ್ಲಿ ಕೈತುಂಬಾ ಆದಾಯ ತಂದು ಕೊಡುವ ಮರ ಎಂದೇ ಕೃಷಿಕರು ನಂಬಿದ್ದರು. ಇದರಿಂದಾಗಿ ಮಲೆನಾಡಿನಲ್ಲಿ ತೋಟಗಳಲ್ಲಿ, ಗದ್ದೆ ಬದುವಿನಲ್ಲಿ ಈ ಮರವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವ ಪರಿಪಾಠ ಕಂಡುಬರುತ್ತಿತ್ತು.

ಇತ್ತೀಚಿನ ವರ್ಷಗಳಲ್ಲಿ ಬೆಳೆಗಾರರಲ್ಲಿ ಜಾಗೃತಿ ಮೂಡಲಾರಂಭಿಸಿದೆ. ಸಿಲ್ವರ್ ಮರದ ದೂರಗಾಮಿ ದುಷ್ಪರಿಣಾಮಗಳು ಒಂದೊಂದಾಗಿ ಅರಿವಿಗೆ ಬರುತ್ತಿದ್ದು ತೋಟಗಳಲ್ಲಿ ಇರುವ ಮರಗಳನ್ನು ಕಟಾವು ಮಾಡುತ್ತಿದ್ದಾರೆ. ಹೊಸದಾಗಿ ಗಿಡ ನೆಡುವುದಕ್ಕೆ ಆಸಕ್ತಿ ತೋರಿಸುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಕಾಫಿ ತೋಟಗಳಲ್ಲಿ ನೆರಳಿನ ಮರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಲಾಗುತ್ತಿದ್ದ ಸಿಲ್ವರ್ ಓಕ್ ನೆರಳಿನ ಮರ ಅಲ್ಲ, ಆಕ್ರಮಣಕಾರಿ ಬೆಳೆ ಎನ್ನುವುದು ಇತ್ತೀಚೆಗೆ ಹಲವರ ಅನುಭವಕ್ಕೆ ಬರುತ್ತಿದೆ. ಬಗೆ ಬಗೆಯ ಮರಗಳಿದ್ದರೆ ಮಣ್ಣಿಗೆ ವಿಭಿನ್ನ ರೀತಿಯ ಸೂಕ್ಷತ್ಮ ಪೋಷಕಾಂಶಗಳು ಸಿಗುತ್ತದೆ. ಆದರೆ ಏಕ ಬೆಳೆಯಿಂದ ಇದು ಸಿಗದೆ ಮಣ್ಣಿನ ಗುಣಮಟ್ಟವೂ ಹಾಳಾಗುತ್ತದೆ ಎನ್ನುವ ಸತ್ಯ ಕಂಡುಕೊಳ್ಳಲಾರಂಭಿಸಿದ್ದಾರೆ.

ಮೊದಲೆಲ್ಲಾ ಕೊಡಗಿನಲ್ಲಿ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಸಿಲ್ವರ್ ಸಸಿಗಳನ್ನು ಬೆಳೆಸಿ ಆಸಕ್ತ ಕೃಷಿಕರಿಗೆ ಪೂರೈಸಲಾಗುತ್ತಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಇತ್ತೀಚಿನ ವರ್ಷಗಳಲ್ಲಿ ಸಿಲ್ವರ್ ಗಿಡ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ. ಸ್ಥಳೀಯ ಪರಿಸರಕ್ಕೆ ಪೂರಕವಾದ ಮತ್ತು ಸ್ಥಳೀಯ ಗಿಡಗಳನ್ನು ಬೆಳೆಸಿ ಪೂರೈಸಲು ನಿರ್ಧರಿಸಲಾಗಿದೆ. ಕೃಷಿಕರು ಕೂಡ ಸ್ಥಳೀಯ ತಳಿಯ ಗಿಡಗಳನ್ನು ತೆಗೆದುಕೊಂಡು ಹೋಗಿ ಬೆಳೆಸಲು ಆಸಕ್ತಿ ತೋರಿಸುತ್ತಿದ್ದಾರೆ.

ಈ ಹಿಂದೆ ಅರಣ್ಯ ಇಲಾಖೆಯಿಂದ ಗಿಡಗಳನ್ನು ಬೆಳೆಸುವ ಸಂದರ್ಭ ಶೇ. ೨೫ರಷ್ಟು ಪ್ರಮಾಣದಲ್ಲಿ ಸಿಲ್ವರ್ ಗಿಡಗಳನ್ನೇ ಬೆಳೆಸಲಾಗುತ್ತಿತ್ತು, ಕಳೆದ ವರ್ಷದಿಂದ ಈ ಪ್ರಮಾಣವನ್ನು ಶೇ. ೫ಕ್ಕಿಂತ ಕಡಿಮೆಗೆ ಇಳಿಸಲಾಗಿದೆ. ಸಿಲ್ವರ್ ಮರಗಳನ್ನು ಹೆಚ್ಚು ಬೆಳೆಸುವುದರಿಂದ ಸ್ಥಳೀಯ ತಳಿಗಳ ಮೇಲೂ ಪರಿಣಾಮ ಆಗುತ್ತಿರುವ ಬಗ್ಗೆ ಬಗ್ಗೆ ಸ್ಥಳೀಯವಾಗಿಯೇ ಚರ್ಚಿಸಿರುವ ಅರಣ್ಯ ಇಲಾಖೆ ಸಿಲ್ವರ್ ಓಕ್ ಬದಲಿಗೆ ಹೆಚ್ಚು ಹೆಚ್ಚು ಸ್ಥಳೀಯ ಜಾತೀಯ ಮರಗಳನ್ನು ಬೆಳೆಸಲು ತೀರ್ಮಾನ ತೆಗೆದುಕೊಂಡಿದೆ. ಸ್ಥಳೀಯ ಜಾತಿಯ ಮರಗಳು ಇಲ್ಲಿಯ ಭೌಗೋಳಿಕ ವಾತಾವರಣ, ಹವಾಮಾನ, ಮಣ್ಣಿನ ಗುಣ ಲಕ್ಷಣಗಳಿಗೆ ಹೊಂದಿಕೊಂಡು ಬೆಳೆಯುವುದರಿಂದ ಪರಿಸರವೂ ಚೆನ್ನಾಗಿರುತ್ತದೆ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

ಸಿಲ್ವರ್ ಮರ ಹಲವರನ್ನು ಶ್ರೀಮಂತರನ್ನಾಗಿ ಮಾಡಿದೆ. ಹೊಸ ಮನೆ ಕಟ್ಟಲು, ಮಕ್ಕಳ ಮದುವೆ ಮಾಡಲು, ಹೊಸ ಆಸ್ತಿ ಖರೀದಿಸಲೂ ಸಹಾಯ ಮಾಡಿದೆ. ಆದರೆ ಈ ಮರದ ದೂರಗಾಮಿ ಅಪಾಯಗಳ ಅರಿವು ಇಲ್ಲದವರು ಈಗಲೂ ಸಿಲ್ವರ್ ಗಿಡಗಳನ್ನು ನೆಡುವುದು ಅಲ್ಲಲ್ಲಿ ಕಾಣಬಹುದು. ೨೦೧೮ರ ನಂತರ ಕೊಡಗು ಸೇರಿದಂತೆ ಮಲೆನಾಡು ಭಾಗದಲ್ಲಿ ಕಾಫಿ ತೋಟ, ಬೆಟ್ಟ-ಗುಡ್ಡಗಳು ಕುಸಿಯಲು ಸಿಲ್ವರ್ ಮರಗಳೇ ಕಾರಣ ಎನ್ನುವುದನ್ನು ಕೆಲವರು ಹೇಳುತ್ತಾರೆ. ಸಿಲ್ವರ್ ಮರಗಳು ಇದ್ದ ಪ್ರದೇಶದ ವ್ಯಾಪ್ತಿಯಲ್ಲೇ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಅತಿ ಹೆಚ್ಚು ತೋಟ, ಗ್ರಾಮಗಳಿಗೆ ಹಾನಿಯುಂಟಾಗಿತ್ತು ಎನ್ನುವ ಅಂಶವನ್ನೂ ನೆನಪಿಸುತ್ತಾರೆ.
ಸಿಲ್ವರ್ ಮರದ ಬೇರು ಭೂಮಿಯ ಆಳಕ್ಕೆ ಹೋಗುವುದಿಲ್ಲ. ಇದರಿಂದಾಗಿ ಮಣ್ಣು ಸವಕಳಿ ತಡೆಯುವಲ್ಲಿ, ಭೂ ಸಡಿಲಿಕೆ ಹಿಡಿದಿಟ್ಟುಕೊಳ್ಳುವಲ್ಲಿ ಈ ಮರಗಳು ವಿಫಲವಾಗಿದೆ. ಬೆಳೆಯ ಫಲವತ್ತತೆಗೂ ಏನೂ ಕೊಡುಗೆ ಸಿಗುವುದಿಲ್ಲ. ಸ್ಥಳೀಯ ಕಾಡು ಜಾತಿಯ ಮರಗಳಿಗೆ ಭೂ ಕುಸಿತ ತಡೆಯುವ ಶಕ್ತಿ ಇದೆ. ಆದರೆ ಸಿಲ್ವರ್ ಮರಗಳಿಗೆ ಆ ಸಾಮರ್ಥ್ಯ ಇಲ್ಲ ಎಂದು ಸಿಲ್ವರ್ ಓಕ್ ಋಣಾತ್ಮಕ ಅಂಶಗಳನ್ನು ಬೆಳೆಗಾರರು ಪಟ್ಟಿ ಮಾಡುತ್ತಾರೆ.

ಕಾಡುಮರಗಳ ಇರಬೇಕಿದ್ದ ಜಾಗದಲ್ಲಿ ಮನುಷ್ಯನ ಅತಿಯಾಸೆಯಿಂದಾಗಿ ಅವುಗಳನ್ನು ಕಡಿದು ಅಲ್ಲಿ ಸಿಲ್ವರ್ ಮರಗಳನ್ನು ಬೆಳೆಸಲಾಯಿತು. ಇದರಿಂದಾಗಿ ಏಲಕ್ಕಿ ಬೆಳೆ ಕೈ ಕೊಟ್ಟಿದೆ. ಕೊಡಗಿನ ವಿಶಿಷ್ಟ ಸ್ವಾಧದ ಕಿತ್ತಳೆಯೂ ಈಗ ಹುಡುಕಬೇಕಾದ ಸ್ಥಿತಿ ಇದೆ. ಜೇನು ಉತ್ಪಾದನೆ ಕಡಿಮೆ ಆಗಲಿ ಕೂಡ ಇದೇ ಕಾರಣವಾಗಿದೆ. ಅರೆಬಿಕಾ ಕಾಫಿಯನ್ನೂ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಈ ಬಗ್ಗೆ ಕೃಷಿಕರಲ್ಲಿ ಬೆಳೆಗಾರರಲ್ಲಿ ಅರಿವು ಮೂಡಬೇಕು.ಸಿಲ್ವರ್ ಬೆಳೆ ಕೈ ಬಿಟ್ಟರೆ ಭವಿಷ್ಯ ಆಶಾದಾಯಕ ಆಗಬಹುದು.

  • ನಾಪಂಡ ಎನ್. ಪೂಣಚ್ಚ, ಪ್ರಗತಿಪರ ಕಾಫಿ ಬೆಳೆಗಾರ

ಸ್ಥಳೀಯ ಜಾತಿಯ ಮರಗಳನ್ನು ಬೆಳೆಸಬೇಕು ಎನ್ನುವ ತೀರ್ಮಾನ ಮಾಡಲಾಗಿದೆ. ಕೊಡಗಿನ ಭೌಗೋಳಿಕ ವಾತಾವರಣಕ್ಕೆ ಸಿಲ್ವರ್ ಮರ ಹೊಂದಿಕೆ ಆಗುತ್ತಿಲ್ಲ. ಇದರಿಂದಾಗಿ ಕಾಫಿ ಇಳುವರಿ ಕಡಿಮೆ ಆಗುತ್ತಿರುವುದೂ ಕಂಡುಬಂದಿದೆ. ಸ್ಥಳೀಯ ಜಾತಿಯ ಮರ, ಗಿಡಗಳ ಮೇಲೂ ಇದರಿಂದ ಪರಿಣಾಮ ಆಗುತ್ತಿದೆ. ಕಾಫಿ ಬೆಳೆಗಾರರೂ ಇತ್ತೀಚೆಗೆ ಸಿಲ್ವರ್ ಮರಗಳನ್ನು ತೆರವು ಮಾಡುತ್ತಿದ್ದಾರೆ. ಸಿಲ್ವರ್ ಗಿಡಗಳಿಗೆ ಮೊದಲಿನಷ್ಟು ಬೇಡಿಕೆಯೂ ಈಗ ಇಲ್ಲ. ಪ್ರಾಣಿ ಪಕ್ಷಿಗಳಿಗೂ ಪ್ರಯೋಜನ ಇಲ್ಲ. ಟಿಂಬರ್‌ಗೂ ಬೇಡಿಕೆ ಇಲ್ಲ.
ಬಿ.ಎನ್.ಎನ್. ಮೂರ್ತಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ಅರಣ್ಯ ವೃತ್ತ