ಜಿಲ್ಲೆ

ಹಾರಂಗಿ ಅಣೆಕಟ್ಟೆಯಲ್ಲಿ ಹೂಳು

ಸುನಿಲ್ ಪೊನ್ನೇಟಿ

ಮಡಿಕೇರಿ:

ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಅಣೆಕಟ್ಟೆ ಈ ವರ್ಷ ಜೂನ್ ಆರಂಭದಲ್ಲೇ ಭರ್ತಿ ಆಗಿದೆ. ಕೊಡಗಿನಲ್ಲಿ ಸತತವಾಗಿ ಮಳೆ ಆಗುತ್ತಿರುವ ಕಾರಣದಿಂದ ಜಲಾಶಯದಲ್ಲಿ ಪ್ರಸ್ತುತ ಗರಿಷ್ಠ ಪ್ರಮಾಣದಲ್ಲಿ ನೀರಿನ ಸಂಗ್ರಹ ಕಾಪಾಡಿಕೊಂಡು ಬರಲಾಗುತ್ತಿದೆ. ಜಲಸಂಪನ್ಮೂಲ ಇಲಾಖೆ ಮಾಹಿತಿ ಪ್ರಕಾರ ಹಾರಂಗಿಯಲ್ಲಿ ಸಮೃದ್ಧವಾಗಿ ನೀರಿನ ಸಂಗ್ರಹ ಇದ್ದರೂ ಈ ಪೈಕಿ ಶೇ. 18ರಷ್ಟು ಪ್ರಮಾಣದಲ್ಲಿ ಹೂಳು ಕೂಡ ತುಂಬಿಕೊAಡಿರುವುದರಿAದ ಅಣೆಕಟ್ಟೆಯ ಜೀವಿತಾವಧಿ ಮೇಲೆ ಪರಿಣಾಮ ಬೀರುವ ಆತಂಕ ಕಾಣಿಸಿಕೊಂಡಿದೆ.

ಸಾಮಾನ್ಯವಾಗಿ ಅಣೆಕಟ್ಟುಗಳನ್ನು ವಿನ್ಯಾಸ ಮಾಡುವಾಗ 75ರಿಂದ 100 ವರ್ಷಗಳ ಜೀವಿತಾವಧಿ ಪರಿಗಣಿಸಲಾಗುತ್ತದೆ ಎನ್ನುತ್ತಾರೆ ತಜ್ಞರು. ಕಾವೇರಿ ನದಿಯ ಪ್ರಮುಖ ಉಪನದಿಗಳಲ್ಲಿ ಒಂದಾಗಿರುವ ಹಾರಂಗಿ ನದಿಗೆ 8.48 ಟಿಎಂಸಿ ಸಾಮರ್ಥ್ಯದ ಅಣೆಕಟ್ಟೆಯನ್ನು 1982ರಲ್ಲಿ ನಿರ್ಮಿಸಲಾಗಿದೆ. 2019 ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಹಾರಂಗಿಯಲ್ಲಿ ಸುಮಾರು 1.236 ಟಿಎಂಸಿಯಷ್ಟು ಹೂಳು ಸಂಗ್ರಹವಾಗಿದೆ. ಹಾಗಾಗಿ ಇಲ್ಲಿ ಡೆಡ್‌ಸ್ಟೋರೇಜ್ ಕಳೆದು ಉಳಿಯುವ ಬಳಕೆ ಯೋಗ್ಯ ನೀರಿನ ಪ್ರಮಾಣ 7.264 ಟಿಎಂಸಿ ಪೈಕಿ ಶೇ.18ರಷ್ಟು ಪ್ರಮಾಣದಲ್ಲಿ ಹೂಳು ತುಂಬಿಕೊAಡಿರುವುದು ಕಂಡುಬರುತ್ತಿದೆ. ಜಲಾಶಯ ನಿರ್ಮಾಣ ಆಗಿ 43 ವರ್ಷಗಳಲ್ಲೇ ಇಷ್ಟು ಪ್ರಮಾಣದಲ್ಲಿ ಹೂಳು ಶೇಖರಣೆ ಆಗಿರುವುದು ಆತಂಕಕಾರಿ ಎನ್ನಲಾಗುತ್ತಿದೆ.

2018ರಲ್ಲಿ ಕೊಡಗಿನಲ್ಲಿ ಸುರಿದ ಕುಂಭದ್ರೋಣ ಮಳೆ ಮತ್ತು ಆನಂತರ ಸಂಭವಿಸಿದ ಭೂಕುಸಿತಗಳ ಪರಿಣಾಮದಿಂದ ಕೆಸರು ಮಿಶ್ರಿತ ನೀರು ನದಿ ಮೂಲಕ ಹರಿದು ಬಂದ ಕಾರಣದಿಂದ ಜಲಾಶಯದಲ್ಲಿ ಇಷ್ಟು ಪ್ರಮಾಣದಲ್ಲಿ ಹೂಳು ಶೇಖರಣೆ ಆಗುವಂತಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ. 2018ರ ಆ.13, 14 ಹಾಗೂ 15ರಂದು ಹಾರಂಗಿ ಜಲಾನಯನ ಪ್ರದೇಶದಲ್ಲಿ ಬರುವ ಮಡಿಕೇರಿ, ಕಾಲೂರು, ಹೆಬ್ಬೆಟಗೇರಿ, ಮಕ್ಕಂದೂರು, ಮುಕ್ಕೋಡ್ಲು, ಹಟ್ಟಿಹೊಳೆ, ಹರದೂರು, ಹೇರೂರು ಭಾಗಗಳಲ್ಲಿ ಬಿಟ್ಟೂ ಬಿಡದೇ ಮಳೆ ಸುರಿದಿತ್ತು. ಈ ಬೆನ್ನಲ್ಲೇ ಈ ವ್ಯಾಪ್ತಿಯ ಬಹುತೇಕ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿ, ಬೆಟ್ಟದಿಂದ ಜರಿದು ಬಂದಿದ್ದ ಮಣ್ಣು ಹಾರಂಗಿ ಮತ್ತು ಅದರ ಉಪನದಿಗಳ ಮೂಲಕ ಜಲಾಶಯ ತಲುಪಿತ್ತು. ಹಾಗಾಗಿ ಜಲಾಶಯದಲ್ಲಿ ಈಗ ಸಾಮಾನ್ಯಕ್ಕಿಂತ ಹೆಚ್ಚು ಹೂಳು ನಿಲ್ಲುವಂತಾಗಿದೆ.

ಪ್ರಾಕೃತಿಕ ವಿಕೋಪದ ನಂತರ ಹಾರಂಗಿ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳಿನ ಪ್ರಮಾಣ ಕಂಡುಹಿಡಿಯಲು ಕರ್ನಾಟಕ ಇಂಜಿನಿರ‍್ಸ್ ರೀಸರ್ಚ್ ಸ್ಟೇಷನ್‌ಗೆ ಸೂಚಿಸಲಾಯಿತ್ತು. ಈ ಸಂಸ್ಥೆ ಜಿಯೋ ಮೇರೈನ್ ಸೊಲ್ಯೂಷನ್ ಪ್ರೆö್ತçÊವೆಟ್ ಲಿಮಿಟೆಡ್ ಎನ್ನುವ ಖಾಸಗಿ ಸಂಸ್ಥೆಗೆ ಈ ಜವಾಬ್ದಾರಿ ಒಪ್ಪಿಸಿದ್ದ ಹಿನ್ನೆಲೆಯಲ್ಲಿ ಸಂಸ್ಥೆಯ 8 ತಜ್ಞರ ತಂಡ 2019ರ ಫೆಬ್ರವರಿಯಲ್ಲಿ ಬಾತಿಮೆಟ್ರಿಕ್ ಸರ್ವೆ ಮತ್ತು ಹೈಡ್ರೋಗ್ರಾಫಿಕ್ ಸರ್ವೆ ಎನ್ನುವ ವಿಧಾನಗಳ ಮೂಲಕ ಹಿನ್ನೀರಿನಲ್ಲಿ ವಿಸ್ತೃತ ಅಧ್ಯಯನ ನಡೆಸಿ, ಹೂಳಿನ ಅಂದಾಜು ಸಮೀಕ್ಷೆ ನಡೆಸಿತ್ತು. ಇವರ ಪ್ರಕಾರ 8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ 1.236 ಟಿಎಂಸಿಯಷ್ಟು ಹೂಳು ಸಂಗ್ರಹ ಆಗಿರುವ ಬಗ್ಗೆ ವರದಿ ನೀಡಲಾಗಿತ್ತು.

ಕೊಡಗು, ಹಾಸನ ಹಾಗೂ ಮೈಸೂರು ಜಿಲ್ಲೆಗಳ 1,34,895 ಎಕರೆ ವ್ಯವಸಾಯ ಭೂಮಿಗೆ ನೀರೊದಗಿಸುವ ಹಾರಂಗಿ ಜಲಾಶಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೂಳು ಸಂಗ್ರಹವಾಗಿರುವುದು ಅಣೆಕಟ್ಟೆಯ ಸಾಮರ್ಥ್ಯದ ಮೇಲೆ ನೇರ ಪರಿಣಾಮ ಬೀರಿದೆ. ಅವಧಿಗೆ ಮೊದಲೇ ಜಲಾಶಯ ಭರ್ತಿ ಆದಂತೆ ಕಂಡು ಬಂದರೂ ವಾಸ್ತವದಲ್ಲಿ ಅಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣಕ್ಕೂ ಅಂಕಿ ಅಂಶಗಳಲ್ಲಿ ತೋರಿಸುತ್ತಿರುವುದಕ್ಕೂ ಅಜಗಜಾಂತರ ಇದೆ ಎನ್ನುವ ಆರೋಪಗಳಿವೆ. ಪರಿಸ್ಥಿತಿ ಹೀಗೆಯೇ ಮುಂದುವವರಿದರೆ ಇನ್ನು ಕೆಲವೇ ವರ್ಷಗಳಲ್ಲಿ ಈ ಅಣೆಕಟ್ಟೆ ರೈತರ ಪಾಲಿಗೆ ನಿರುಪಯುಕ್ತ ಆಗಲಿದೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ.

ಅಣೆಕಟ್ಟೆಯ ನೀರಿನ ಸಂಗ್ರಹ ಸಾಮರ್ಥ್ಯ ಕಾಪಾಡಿಕೊಳ್ಳುವುದರ ಜತೆಗೆ ಜೀವಿತಾವಧಿ ಹೆಚ್ಚಿಸುವುದಕ್ಕೋಸ್ಕರ 130 ಕೋಟಿ ರೂ. ವೆಚ್ಚದಲ್ಲಿ ಹಾರಂಗಿ ಜಲಾನಯನ ಪ್ರದೇಶದ ಪುನಶ್ಚೇತನ ಕಾಮಗಾರಿ ಆರಂಭವಾಗಿದ್ದರೂ ನಿರಂತರ ಮಳೆಯ ಕಾರಣದಿಂದ ಕುಂಟುತ್ತಾ ಸಾಗಿದೆ. ಜಲಾಶಯಗಳಲ್ಲಿ ಹೂಳು ತುಂಬಿಕೊAಡರೆ ಅದನ್ನು ತೆರವು ಮಾಡುವ ಮೂಲಕ ಅಣೆಕಟ್ಟೆ ಸಾಮರ್ಥ್ಯ ಮರುಸ್ಥಾಪಿಸಲು ಪ್ರಯತ್ನಿಸುವುದು ಸಾಮಾನ್ಯ. ಆದರೆ ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಸಂಗ್ರಹವಾಗಿರುವ ಹೂಳು ತೆಗೆಯುವುದು ಮಾತ್ರವಲ್ಲದೆ ಜಲಾನಯನ ಪ್ರದೇಶದಲ್ಲಿ ಮತ್ತೆ ಗುಡ್ಡ ಕುಸಿಯದಂತೆ, ಪುನಃ ಹೂಳು ಬಂದು ಜಲಾಶಯ ಸೇರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಉದ್ದೇಶದಿಂದ ಹಾರಂಗಿ ಅಣೆಕಟ್ಟೆ ಪುನ್ಚೇತನ ಮತ್ತು ಅಭಿವÊದ್ಧಿ ಕಾಮಗಾರಿ ನಡೆಯುತ್ತಿದೆ.

2019ರ ಬಜೆಟ್‌ನಲ್ಲೇ ಈ ಕಾಮಗಾರಿಗಾಗಿ 130 ಕೋಟಿ ರೂ. ಮೊತ್ತ ತೆಗೆದಿಟ್ಟಿದ್ದರೂ ವಿವಿಧ ಕಾರಣಗಳಿಂದಾಗಿ ಕಾಮಗಾರಿ ಶುರುವಾಗಿದ್ದು ಮಾತ್ರ 2022ರಲ್ಲಿ. ಬಜೆಟ್‌ನಲ್ಲಿ ಮೀಸಲಿರಿಸಲಾಗಿದ್ದ ಈ ಮೊತ್ತದಲ್ಲಿ 39 ಕೋಟಿ ರೂ.ಗಳನ್ನು ಹೂಳು ತೆಗೆಯಲು ಬಳಸಲಾಗುತ್ತದೆ. ಉಳಿದ ಹಣವನ್ನು ಅಲ್ಲಲ್ಲಿ ತಡೆಗೋಡೆ, ಪಿಕಪ್ (ಚೆಕ್‌ಡ್ಯಾಂ), ಸೇತುವೆ, ರಸ್ತೆ ನಿರ್ಮಾಣ ಹಾಗೂ ಅಧ್ಯಯನ ಕಾರ್ಯಕ್ಕೆ ಉಪಯೋಗಿಸಲಾಗುತ್ತಿದೆ. ಅಗತ್ಯವಿರುವ ಕಡೆ ಸೇತುವೆ, ರಸ್ತೆಗಳನ್ನು ನಿರ್ಮಿಸುವ ಮೂಲಕ ಜಲಾನಯನ ಪ್ರದೇಶದ ನಿವಾಸಿಗಳ ಬದುಕಿಗೂ ನೆರವು ನೀಡುವುದೂ ಈ ಯೋಜನೆಯಲ್ಲಿ ಸೇರಿದೆ.

ಹಾರಂಗಿ ಜಲಾಶಯದಲ್ಲಿ ಸದ್ಯ 1.236 ಟಿಎಂಸಿಯಷ್ಟು ಹೂಳಿನ ಸಂಗ್ರಹ ಇದ್ದರೂ ಹಾರಂಗಿ ಅಣೆಕಟ್ಟೆ ಪುನ್ಚೇತನ ಮತ್ತು ಅಭಿವÊದ್ಧಿ ಯೋಜನೆ ಆಡಿಯಲ್ಲಿ ಸಂಗಮ ಸ್ಥಳಗಳಲ್ಲಿ ಮಾತ್ರ ಕೇವಲ 0.031 ಪ್ರಮಾಣದ ಹೂಳನ್ನು ತೆಗೆಯುವ ಪ್ರಸ್ತಾಪ ಇದೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ಹೂಳು ಸಂಗ್ರಹ ಆಗಿದ್ದರೂ ಅತ್ಯಲ್ಪ ಪ್ರಮಾಣದಲ್ಲಿ ಹೂಳು ತೆರವು ಮಾಡುವುದರಿಂದ ಅಣೆಕಟ್ಟೆಯ ಸಾಮರ್ಥ್ಯ ವೃದ್ಧಿಗೆ ಹೇಗೆ ಸಹಾಯ ಆಗುತ್ತದೆ ? ಎಂದು ಪ್ರಶ್ನಿಸುತ್ತಾರೆ ಹಾರಂಗಿ ನೀರು ಬಳಕೆದಾರರ ಒಕ್ಕೂಟದ ಪ್ರತಿನಿಧಿಗಳು.

ಈ ಮಧ್ಯೆ ಜಿಲ್ಲೆಯಲ್ಲಿ ವರ್ಷದ ಬಹುತೇಕ ತಿಂಗಳು ಮಳೆಗಾಲವೇ ಆಗಿದ್ದು, ನದಿ ತುಂಬಿ ಹರಿಯುತ್ತಿರುವುದರಿಂದ ಕಾಮಗಾರಿ ನಡೆಸಲು ಕಷ್ಟವಾಗುತ್ತಿದೆ. ವರ್ಷದಲ್ಲಿ 5 ತಿಂಗಳು ಮಾತ್ರ ಕೆಲಸ ಮಾಡಲು ಅವಕಾಶ ಸಿಗುತ್ತಿದ್ದು ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿದೆ. ಈ ತನಕ ಶೇ. 20ರಷ್ಟು ಮಾತ್ರ ಕಾಮಗಾರಿ ಪೂರ್ಣವಾಗಿದೆ. ಹಟ್ಟಿಹೊಳೆ, ಹಮ್ಮಿಯಾಲ, ನಂದಿಮೊಟ್ಟೆ ಭಾಗದ ನದಿಯ ಪಾರ್ಶ್ವಗಳಲ್ಲಿ ಗುಡ್ಡಕುಸಿತ, ಕೊರೆತ ಹಾಗೂ ಉಪನದಿಗಳಲ್ಲಿನ ನೀರಿನ ಹರಿಯುವಿಕೆ ವೇಗವನ್ನು ಮಿತಿಗೊಳಿಸಲು ಒಟ್ಟು ಸುಮಾರು 4,700 ಮೀಟರ್ ಸ್ಟೀಲ್ ವೈರ್ ಮೆಸ್ ಗೆಬಿಯನ್ ವಾಲ್ ನಿರ್ಮಾಣ ಕಾರ್ಯ ಮಳೆಗಾಲಕ್ಕೆ ಮೊದಲು ಅಲ್ಲಲ್ಲಿ ನಡೆದಿದೆ.

ಈ ವರ್ಷ ನೀರು ಕಡಿಮೆ ಇರುವ ಸಂದರ್ಭದಲ್ಲಿ ಅಣೆಕಟ್ಟೆಯಿಂದ ಸುಮಾರು 1 ಕಿಮೀ ದೂರದಿಂದÀ ಹಿನ್ನೀರು ಪ್ರದೇಶದಲ್ಲಿ ನದಿಯ ಹರಿವಿನ ಇಕ್ಕೆಲಗಳಲ್ಲಿ ಸಂಗ್ರಹವಾಗಿರುವ ಹೂಳು ತೆಗೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವೇಳೆ ಇಲ್ಲಿರುವ ಜಲಚರಗಳಿಗೆ ಯಾವುದೇ ಅಪಾಯ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ ಎನ್ನುತ್ತಾರೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು.

ಹಾರಂಗಿ ಜಲಾನಯನ ಪ್ರದೇಶ ಮತ್ತು ನದಿ ಪಾತ್ರದ ಪುನಶ್ಚೇತನ ಹಾಗೂ ರಕ್ಷಣೆ ಸಂಬAಧದ 130 ಕೋಟಿ ರೂ. ಮೊತ್ತದ ಕಾಮಗಾರಿಗೆ ಸರ್ಕಾರದ 2020ರ ನವೆಂಬರ್ 19ರಂದು ಅನುಮೋದನೆ ಕೊಟ್ಟಿದೆ. ಹಾರಂಗಿ ಅಣೆಕಟ್ಟೆಯಲ್ಲಿ ಶೇಖರಣೆಯಾಗಿರುವ ಹೂಳಿನ ಪ್ರಮಾಣ ಒಟ್ಟು 1.236 ಟಿ.ಎಂ.ಸಿ ಗಳಷ್ಟಿದ್ದು, 39 ಕೋಟಿ ರೂ. ಮೊತ್ತದಲ್ಲಿ 0.031 ಟಿ.ಎಂ.ಸಿ ಹೂಳನ್ನು ಜಲಾಶಯದ ಹಿಂಭಾಗದಲ್ಲಿ ಬರುವ ಕನ್‌ಪ್ಲೂಯೆನ್ಸ್ ಪಾಯಿಂಟ್‌ನಲ್ಲಿ ತೆಗೆಯಲಾಗುವುದು. ಕಾಮಗಾರಿ ಪ್ರಸ್ತುತ ಪ್ರಗತಿಯಲ್ಲಿದೆ.

ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ