ಹುಬ್ಬಳ್ಳಿ: ಪೊಲೀಸರು ಪ್ರಕರಣಗಳನ್ನು ಭೇದಿಸಲು ಎಷ್ಟೊಂದು ಪರಿಶ್ರಮ ಪಡುತ್ತಾರೆ, ಪ್ರತಿಯೊಂದು ಕೇಸ್ ಎಷ್ಟು ರೋಚಕ ಹಾಗೂ ಅಧಿಕಾರಿಗಳು ಮಾಡುವ ಒಳ್ಳೆಯ ಕೆಲಸಗಳನ್ನು ಜನರಿಗೆ ತಿಳಿಸುವುದರ ಜತೆಗೆ ದಾಖಲೀಕರಣ ಮಾಡುವ ಸಲುವಾಗಿ ನಾನು ಬರೆಯುತ್ತೇನೆ ಎಂದು ಖ್ಯಾತ ಅಂಕಣಕಾರರು, ನಿವೃತ್ತ ಡಿಜಿಪಿ ಡಾ. ಡಿ.ವಿ. ಗುರುಪ್ರಸಾದ ಹೇಳಿದರು.
ಇಲ್ಲಿಯ ವಿದ್ಯಾನಗರ ದೇಶಪಾಂಡೆ ಫೌಂಡೇಷನ್ ಸಭಾಭವನದಲ್ಲಿ ಬುಧವಾರ ತಮ್ಮ ನೂರನೇ ಕೃತಿ ಸಿಲ್ಕ್ ರೂಟ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪೊಲೀಸ್ ಅಧಿಕಾರಿಯಾಗಿದ್ದಾಗ ಅನೇಕರು ನಾನು ಬರೆಯುವುದನ್ನು ನೋಡಿ ಟೀಕಿಸಿದ್ದರು. ಪೊಲೀಸ್ ಕೆಲಸ ಮಾಡುವುದಿಲ್ಲ. ಕೇವಲ ಬರೆಯುತ್ತಾರೆ ಎಂದರು.
ಆದರೆ, ನಾನು ಎರಡೂ ಕೆಲಸಕ್ಕೆ ನ್ಯಾಯ ಒದಗಿಸಿದ್ದೇನೆ. 1995ರಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ಸಂದರ್ಭದಲ್ಲಿ ಈದ್ಗಾ ಗಲಾಟೆ ಸಲುವಾಗಿ ಪದೇಪದೆ ಕರ್ಫ್ಯೂ ಹಾಕಬೇಕಾಗಿತ್ತು. ಆ ಸಂದರ್ಭದಲ್ಲಿ ಪೊಲೀಸರ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಆಗ ಜನರು- ಪೊಲೀಸರ ಮಧ್ಯೆ ವಿಶ್ವಾಸ ಮೂಡಿಸುವ ಕೆಲಸ ಮಾಡಿದೆ ಎಂದು ಅಂದಿನ ದಿನಗಳನ್ನು ಸ್ಮರಿಸಿದರು.
ಕಲಿತಿದ್ದು ಧಾರವಾಡದಲ್ಲಿ. ನನಗೆ ಅವಳಿನಗರ ಎಂದರೆ ತವರು ಮನೆಯಂತೆ. ಇಲ್ಲಿಯೇ ಪುಸ್ತಕ ಬಿಡುಗಡೆ ಆಗಬೇಕು ಎಂಬುದು ನನ್ನ ಆಶಯ ಆಗಿತ್ತು. ಸಿಲ್ಕ್ ರೂಟ್ ಎಂಬುದು ಫ್ಯಾಸಿನೇಟಿಂಗ್ ಬುಕ್. ಭಾರತದೊಂದಿಗೆ ಈ ಮಾರ್ಗದ ಮೂಲಕ ಬಂದು ವಿದೇಶಿಯರು ವ್ಯಾಪಾರ ವಹಿವಾಟು ಮಾಡುತ್ತಿದ್ದರು. ಹಲವು ವರ್ಷಗಳು ಅಧ್ಯಯನ ಮಾಡಿ ಬರೆದ ಕೃತಿ ಇದು. ಈ ಮಾರ್ಗದ ಮೂಲಕ ಹಿಂದುಯಿಸಂ ಜಗತ್ತಿನಾದ್ಯಂತ ಪಸರಿಸಿತು ಎಂಬುದರ ದಾಖಲೀಕರಣ ಇದೆ. ಇದನ್ನು ಓದಿದರೆ ಮೇರಾ ದೇಶ ಮಹಾನ್ ಎಂಬುದು ಅರಿವಿಗೆ ಬರುತ್ತದೆ, ಯುವಕರಿಗೆ ಓದುವ ಅಧ್ಯಯನ ಸಾಮಗ್ರಿಯಾಗಲಿದೆ ಎಂದರು.
ಪತ್ರಕರ್ತ ಶಿವರಾಮ ಅಸುಂಡಿ ಮಾತನಾಡಿದರು.
ಡಿಸಿಪಿ ರವೀಶ ಸಿ.ಆರ್. ಪ್ರಾಸ್ತಾವಿಕ ಮಾತನಾಡಿದರು.
ಇನ್ಸಪೆಕ್ಟರ್ ಸಮಿವುಲ್ಲಾ, ಉಮೇಶ ಚಿಕ್ಕಮಠ, ವಿಜಯಕುಮಾರ ತಳವಾರ, ಒಡೆಯರ, ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಮಣ್ಯ. ಇತರರು ಇದ್ದರು.
ಇನ್ಸಪೆಕ್ಟರ್ ಮಾರುತಿ ಗುಳ್ಳಾರಿ ಕಾರ್ಯಕ್ರಮ ನಿರೂಪಿಸಿದರು.