ಮೊಳಕಾಲ್ಮೂರು: ಮೊಳಕಾಲ್ಮೂರಿನಲ್ಲಿ ರೇಷ್ಮೆ ಖರೀದಿ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ತಾಪಂ ಆಡಳಿತಾಧಿಕಾರಿ ಶಿವರಾಜ್ ಕುಲಕರ್ಣಿ ಸೂಚಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ರೇಷ್ಮೆ ಗೂಡು ಉತ್ಪಾದನೆ, ರೇಷ್ಮೆ ಸೀರೆ ಮಾರಾಟದಲ್ಲಿ ಮೊಳಕಾಲ್ಮೂರು ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದೆ. ದೂರದ ರಾಮನಗರ ಅಥವಾ ಬೆಂಗಳೂರಿಗೆ ಕೊಂಡೊಯ್ಯುವ ಬದಲು ಇಲ್ಲೇ ಮಾರುಕಟ್ಟೆ ವ್ಯವಸ್ಥೆ ಆಗಬೇಕು.
ಇದರಿಂದ ಕೃಷಿಕರಿಗೆ ಬಹಳಷ್ಟು ಅನುಕೂಲ ಆಗಲಿದೆ. ಜತೆಗೆ ಅಕ್ಕಪಕ್ಕದ ತಾಲೂಕು, ಜಿಲ್ಲೆಗಳಲ್ಲೂ ರೇಷ್ಮೆ ಕೃಷಿ ಹೆಚ್ಚಾಗಲಿದೆ ಎಂದರು.
ಈ ಕುರಿತು ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ತಾವು ತಮ್ಮ ಮೇಲಧಿಕಾರಿಗಳಿಗೆ ತಕ್ಷಣ ಪ್ರಸ್ತಾವನೆ ಕಳುಹಿಸುವುದು ಎಂದು ರೇಷ್ಮೆ ವಿಸ್ತರಣಾಧಿಕಾರಿ ಪರಮೇಶ್ವರಪ್ಪಗೆ ಸೂಚನೆ ನೀಡಿದರು.
ಕೃಷಿ ಅಧಿಕಾರಿ ಡಾ.ಉಮೇಶ್ ಮಾತನಾಡಿ, ತಾಲೂಕಿನಲ್ಲಿ 28390 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಇದೆ. ಈ ಪೈಕಿ ಮುಂಗಾರು ಬೆಳೆ ಎಂದು ಈಗಾಗಲೇ 3350 ಹೆ. ಬಿತ್ತನೆ ಆಗಿದೆ ಎಂದರು.
202 ಅಂಗನವಾಡಿ ಕೇಂದ್ರ
ಸಿಡಿಪಿಒ ನವೀನ್ ಮಾತನಾಡಿ, ತಾಲೂಕಿನಲ್ಲಿ 202 ಅಂಗನವಾಡಿ ಕೇಂದ್ರಗಳಿವೆ. ಆದ್ಯತೆ ಮೇರೆಗೆ ಹೊಸದಾಗಿ 22 ಅಂಗನವಾಡಿ ಕೇಂದ್ರ ಮಂಜೂರಾಗಿವೆ.
14,349 ಮಕ್ಕಳ ಆರೈಕೆಯಲ್ಲಿ ಗುಣಮಟ್ಟದ ಆಹಾರ ಮತ್ತು ಸಾಕ್ಷರತೆಗೆ ಆದ್ಯತೆ ಕೊಡಲಾಗಿದೆ.
ಸುಕನ್ಯಾ ಸಂಜೀವಿನಿ ಯೋಜನೆ ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದರು.
ತಾಪಂ ಇಒ ಜಾನಕಿರಾಮ್, ಅಧಿಕಾರಿಗಳಾದ ಡಾ.ರಂಗಪ್ಪ, ಡಾ. ಮಧುಕುಮಾರ, ಮಾಲತಿ, ಡಿ.ಚಿದಾನಂದಪ್ಪ, ರುದ್ರಮುನಿ, ಪಾತಲಿಂಗಪ್ಪ ಪ್ರಸಾದ್, ನಂದೀಶ್, ತಿಪ್ಪೇಸ್ವಾಮಿ, ಎಲ್.ಶಿವಮೂರ್ತಿ, ಶ್ರೀಕಾಂತ್ ಇತರರಿದ್ದರು.
ತಾಲೂಕಲ್ಲಿ ಶಿಕ್ಷಕರ ಕೊರತೆ
ಶೈಕ್ಷಣಿಕ ವರ್ಷದ ಶಾಲೆಗಳು ಪ್ರಾರಂಭವಾಗಿವೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ 249 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 28483 ಮಕ್ಕಳ ದಾಖಲಾತಿ ಇದೆ ಎಂದು ಬಿಇಒ ಜಯಲಕ್ಷ್ಮೀ ಹೇಳಿದರು.
239 ಶಿಕ್ಷಕರ ಕೊರತೆ ಇದೆ. ಸರಿದೂಗಿಸಲು 150 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಕಾಯಂ ಶಿಕ್ಷಕರಿಲ್ಲದ 15 ಶಾಲೆ ಹಾಗೂ 25 ಏಕೋಪಾಧ್ಯಾಯ ಶಾಲೆಗಳಲ್ಲಿ ಶಿಕ್ಷಣದ ಕೊರತೆ ಆಗದಂತೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದರು.