* ಮಳೆಯಿಂದ ರೈತರಿಗೆ ನಷ್ಟ
*ರಾಮನಗರ ಗೂಡು ಮಾರಾಟಕ್ಕೆ ಸಮರ್ಪಕ ವ್ಯವಸ್ಥೆ ಒದಗಿಸಿ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ರಾಮನಗರದಲ್ಲಿರುವ ಏಷ್ಯಾಖಂಡದಲ್ಲಿಯೇ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆಯಲ್ಲಿ ಗೂಡು ಮಾರಾಟಕ್ಕೆ ಸಮರ್ಪಕ ವ್ಯವಸ್ಥೆ ಒದಗಿಸಿ ಬೆಳೆಗಾರರು ನಷ್ಟದ ಹಾದಿ ತಪ್ಪಿಸಬೇಕಿದೆ.
ಮಾರುಕಟ್ಟೆಯಲ್ಲಿ ಪ್ರತಿದಿನ 40 ರಿಂದ 50 ಟನ್ ರೇಷ್ಮೆ ಗೂಡು ಮಾರಾಟವಾಗುತ್ತದೆ. ಇಲ್ಲಿ ನಾಲ್ಕು ಖರೀದಿ ಘಟಕಗಳಿದ್ದು, 750ಕ್ಕೂ ಹೆಚ್ಚು ಜಾಲರಿಗಳಿವೆ. ಲಕ್ಷಾಂತರ ರೈತರು ಮತ್ತು ರೇಷ್ಮೆ ಉದ್ಯಮಿಗಳು ಇದರಿಂದ ಬದುಕು ಕಟ್ಟಿಕೊಂಡಿದ್ದಾರೆ. ನೆರೆಯ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಬಳ್ಳಾರಿ, ತುಮಕೂರು, ಮಂಡ್ಯ ಜಿಲ್ಲೆ ಸೇರಿ ಸಾವಿರಾರು ರೈತರು ಪ್ರತಿದಿನ ಗೂಡು ಖರೀದಿಗೆ ಮಾರುಕಟ್ಟೆಗೆ ಬಂದು ಹೋಗುತ್ತಾರೆ.
ಇಂತಹ ಪ್ರಸಿದ್ಧ ಮಾರುಕಟ್ಟೆಯಲ್ಲಿ ರೈತರಿಗೆ ಸೂಕ್ತ ಸೌಲಭ್ಯಗಳಿಲ್ಲ. ಮಳೆ ಬಂದರೆ ಛಾವಣಿ ಸೋರುತ್ತದೆ. ನೀರು ಗೂಡುಗಳಿಗೆ ರಾಚಿ ರೇಷ್ಮೆಗೂಡು ಒದ್ದೆಯಾಗಿ ರೈತರು ನಷ್ಟದ ಹಾದಿ ತುಳಿಯುವಂತಾಗಿದೆ.
ಮಳೆ ಬಂದರೆ ಗೂಡು ನೆನೆಯುವ ಜತೆಗೆ ಜಾಲರಿ ಸಿಗುವುದಿಲ್ಲ. ರಾತ್ರಿ ವೇಳೆ ವಿದ್ಯುತ್ ಕೈ ಕೊಟ್ಟರೆ ಜನರೇಟರ್ ವ್ಯವಸ್ಥೆ ಸರಿಯಿಲ್ಲ. ಕೂಡಲೇ ರೇಷ್ಮೆ ಮಾರುಕಟ್ಟೆಯಲ್ಲಿ ಮಳೆ ನೀರಿನಿಂದ ರಕ್ಷಣೆ ಮತ್ತು ದಿನದ 24 ಗಂಟೆಯೂ ನಿರಂತರವಾಗಿ ವಿದ್ಯುತ್ ಸಮಸ್ಯೆಯಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಜತೆಗೆ ಸುಸಜ್ಜಿತ ಶೌಚಗೃಹ, ರೈತರಿಗೆ ವಿಶ್ರಾಂತಿ ವ್ಯವಸ್ಥೆಗೆ ಜಾಗ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ ಎನ್ನುತ್ತಾರೆ ರೇಷ್ಮೆ ಬೆಳೆಗಾರ ರೈತ ಮಹದೇವಯ್ಯ.
ಶನಿವಾರ ಸಂಜೆ ದಿಢೀರನೆ ಸುರಿದ ಮಳೆಗೆ ರೇಷ್ಮೆ ಮಾರುಕಟ್ಟೆಯಲ್ಲಿ ನೂರಾರು ರೈತರು ಸಮಸ್ಯೆ ಎದುರಿಸಿದರು. ಮಾರುಕಟ್ಟೆ ಛಾವಣಿಯಿಂದ ನೀರು ಒಂದೊಂದು ಕಡೆ ಬೀಳುತ್ತಿದ್ದರೆ ಕಿಟಕಿ ಬಾಗಿಲ ಕಡೆಯೂ ಗೂಡುಗಳ ಮೇಲೆ ನೀರು ಬಿದ್ದು, 100ಕ್ಕೂ ಹೆಚ್ಚು ರೈತರು ಪರದಾಡಿದರು.
ಜಾಲರಿಯಲ್ಲಿದ್ದ ಗೂಡಿಗೆ ಮಳೆ ಹನಿ ಬೀಳುತ್ತಿದ್ದರಿಂದ ರಕ್ಷಣೆಗೆ ರೈತನೊಬ್ಬ ತೊಟ್ಟಿದ್ದ ಶರ್ಟ್ ತೆಗೆದು ಚೀಲ ಮತ್ತು ಅಂಗಿಯನ್ನು ಹೊದಿಕೆ ಮಾಡಿ ಗೂಡು ರಕ್ಷಣೆ ಮಾಡಿಕೊಂಡ ಚಿತ್ರಣವೂ ಕಂಡು ಬಂತು. ಮಾರುಕಟ್ಟೆ ಹೊರಭಾಗದಲ್ಲಂತೂ ಮಳೆ ನೀರು ಬಿರುಸಾಗಿ ಬರುತಿದ್ದರಿಂದ ರೈತರು ಮೂಟೆ ಮೂಟೆಗಳನ್ನೇ ಜಾಲರಿ ಮೇಲಿಟ್ಟು ರೇಷ್ಮೆಗೂಡು ಉಳಿದರೆ ಸಾಕು ಎಂದು ಪರದಾಡಿದರು.
ಮಳೆಗೆ ವಿದ್ಯುತ್ ಸಂಪರ್ಕ ಕೈಕೊಟ್ಟಿತು. ಈ ವೇಳೆ ಮಾರುಕಟ್ಟೆಯಲ್ಲಿದ್ದ ಜನರೇಟರ್ ಚಾಲನೆಗೊಳ್ಳಲಿಲ್ಲ. ಇದರಿಂದ ರೈತರು ಕತ್ತಲಿನಲ್ಲಿಯೇ ಕಾಲ ಕಳೆದರು.
ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಂದ ರೈತರಿಗೆ, ಗೂಡು ಖರೀದಿದಾರರಿಗೆ ಹಲವು ಸೌಲಭ್ಯಗಳು ಬೇಕಾಗಿವೆ. ಅಭಿವೃದ್ಧಿ ಕೆಲಸಕ್ಕೆ ಶಾಸಕ ಇಕ್ಬಾಲ್ ಹುಸೇನ್ ಅವರು 1.66 ಲಕ್ಷ ರೂ. ವೆಚ್ಚದಲ್ಲಿ ಹೆಚ್ಚುವರಿ ಖರೀದಿ ಹಾಲ್, ಮಳೆ ಬಿಸಿಲಿಗೆ ಸಮಸ್ಯೆಯಾಗದಂತೆ ಸೀಟ್ ಜೋಡಣೆ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತಂದು ಕೆಲಸ ಪ್ರಾರಂಭಕ್ಕೆ ಚಾಲನೆ ನೀಡಿದ್ದಾರೆ. ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ. ಕೆ. ರವಿ, ರೇಷ್ಮೆ ಬೆಳೆಗಾರ ಸಂಘದ ಅಧ್ಯಕ್ಷ, ರಾಮನಗರಹೆಚ್ಚು ಮಳೆ ಬಂದ ಕಾರಣ ಗಾಳಿಯಲ್ಲಿ ಮಳೆ ನೀರು ಎರಚಲು ಹೊಡೆದ ಪರಿಣಾಮ ಒಂದಷ್ಟು ಸಮಸ್ಯೆ ಉಂಟಾಗಿತ್ತು. ಸ್ವ ಚಾಲನೆ ಜನರೇಟರ್ ಆಗಿರದ ಕಾರಣ ವಿದ್ಯುತ್ ವ್ಯತ್ಯಯ ಸಂದರ್ಭದಲ್ಲಿ ಸಮಸ್ಯೆ ಉಂಟಾಗಿತ್ತು. ನಂತರ ಸರಿಯಾಗಿದೆ. ಛಾವಣೆಯಲ್ಲಿ ನೀರು ಸೋರುತ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಜತೆಗೆ ರಾತ್ರಿ ವೇಳೆ ಮಾರುಕಟ್ಟೆಯಲ್ಲಿ ಹೆಚ್ಚುವರಿ ಸಿಬ್ಬಂದಿ ವ್ಯವಸ್ಥೆ ಮಾಡಲಾಗುತ್ತದೆ. ಭೀಮಪ್ಪ, ಉಪ ನಿರ್ದೇಶಕರು, ರೇಷ್ಮೆ ಗೂಡಿನ ಮಾರುಕಟ್ಟೆ, ರಾಮನಗರ.ರಾಮನಗರ ರೇಷ್ಮೆ ಮಾರುಕಟ್ಟೆಗೆ ಮೊದಲು ಕಟ್ಟಡಗಳು ಸುಣ್ಣ ಬಣ್ಣ ಕಾಣಬೇಕು. ಮಳೆ ನೀರಿನಿಂದ ರೇಷ್ಮೆ ಗೂಡುಗಳಿಗೆ ರಕ್ಷಣೆ ಜತೆಗೆ ಸಮರ್ಪಕ ವಿದ್ಯುತ್ ವ್ಯವಸ್ಥೆ ರೇಷ್ಮೆ ಗೂಡು ತರುವ ರೈತರಿಗೆ ಕುಡಿಯುವ ನೀರು, ಸುಸಜ್ಜಿತ ಶೌಚಗೃಹ ಮತ್ತಿತರ ಮೂಲ ಸೌಕರ್ಯ ಒದಗಿಸಿ ರಾತ್ರಿ ವೇಳೆ ಮಾರುಕಟ್ಟೆಯಲ್ಲಿ ಅಧಿಕಾರಿಗಳು ಸಿಬ್ಬಂದಿ ಇರುವ ವ್ಯವಸ್ಥೆ ಆಗಬೇಕು. ಬಿ.ಎಸ್. ಅನಿಲ್, ರೇಷ್ಮೆ ಬೆಳೆಗಾರ ರೈತ, ಬೊಮ್ಮಚ್ಚನಹಳ್ಳಿ.