ಕೋಲಾರ: ರಾಮನಗರದಲ್ಲಿ ನಡೆದ ರೀಲರ್‌ಗಳು ಹಾಗೂ ರೇಷ್ಮೆ ಬೆಳಗಾರರ ಸಭೆ ಯಶಸ್ವಿಯಾಗಿದ್ದು, ಭಾನುವಾರದಿಂದ ಎಂದಿನಂತೆ ಗೂಡು ಖರೀದಿ ಆರಂಭವಾಗಲಿದೆ.
ಇದಕ್ಕೂ ಮುನ್ನ ರೇಷ್ಮೆ ರೀಲರ್‌ಗಳ ನೆರವಿಗೆ ಧಾವಿಸುವಂತೆ ಒತ್ತಾಯಿಸಿ ರೀಲರ್‌ಗಳು ಶನಿವಾರ ಹರಾಜು ಪ್ರಕ್ರಿಯೆಯಿಂದ ದೂರ ಉಳಿದು ಪ್ರತಿಭಟಿಸಿದರೆ, ಇನ್ನೊಂದೆಡೆ ಗೂಡು ತಂದಿರುವ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ನಗರದ ಸರ್ಕಾರಿ ಗೂಡು ಮಾರುಕಟ್ಟೆಗೆ ಎಂದಿನಂತೆ ರೈತರು ಗೂಡುಗಳನ್ನು ತಂದಿದ್ದರು. ಮಾರುಕಟ್ಟೆ ಅಧಿಕಾರಿಗಳು ಹರಾಜು ಚೀಟಿಯನ್ನೂ ನೀಡಿದ್ದರು. ರೈತರು ಯಾವಾಗ ಹರಾಜು ನಡೆಯುವುದೋ, ನಡೆಯದಿದ್ದಲ್ಲಿ ಮುಂದೇನು ಎಂಬ ಚಿಂತೆಯಲ್ಲಿ ಮುಳುಗಿದ್ದರು. ಆದರೆ ಬೇಡಿಕೆ ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ರೀಲರ್‌ಗಳು ಹರಾಜು ಪ್ರಕ್ರಿಯೆಯಿಂದ ದೂರ ಉಳಿದರು.
ಗೂಡು ಹರಾಜು ಸಂಬಂಧ ಸಂಜೆ 7 ಗಂಟೆ ನಂತರ ತೀರ್ಮಾನ ತೆಗೆದುಕೊಳ್ಳುವುದಾಗಿ ರೀಲರ್ಸ್ ತಿಳಿಸಿದ್ದರಿಂದ ಅನೇಕ ರೈತರು ಗೂಡು ವಾಪಸ್ ತೆಗೆದುಕೊಂಡು ಹೋದರೆ, ಇನ್ನೂ ಕೆಲವರು ಮಾರುಕಟ್ಟೆಯಲ್ಲೇ ಉಳಿದಿದ್ದರು.
ರೀಲರ್‌ಗಳ ಅಳಲು: ಕರೊನಾ ಹಿನ್ನೆಲೆಯಲ್ಲಿ 50 ದಿನಗಳಿಂದ ರೀಲರ್ಸ್ ಸೊಸೈಟಿ, ಇನ್ನಿತರೆಡೆ ನೂಲು ಅಡ ಇಟ್ಟು ರೈತರಿಂದ ಗೂಡು ಖರೀದಿಸಿದ್ದೇವೆ. ಹೊರಗಡೆ ನೂಲು ಸಾಗಾಣಿಕೆ ಸಾಧ್ಯವಾಗುತ್ತಿಲ್ಲ, ಆಂಧ್ರಪ್ರದೇಶ, ತಮಿಳುನಾಡಿನ ವ್ಯಾಪಾರಿಗಳು ಕರೊನಾ ಮುಗಿಯುವವರೆಗೆ ವಹಿವಾಟು ನಡೆಸದಿರಲು ತೀರ್ಮಾನಿಸಿರುವುದರಿಂದ ನೂಲು ಕೇಳುವವರಿಲ್ಲ ಎಂಬುದು ರೀಲರ್ಸ್‌ಗಳ ಅಳಲಾಗಿದೆ. ಕಚ್ಚಾ ರೇಷ್ಮೆ ನೂಲಿಗೂ ಧಾರಣೆ ಇಲ್ಲ, ಕಳೆದ ವಾರ ವಿಧಾನಸೌಧದಲ್ಲಿ ರೀಲರ್ಸ್ ಸಭೆಯಲ್ಲಿ ಕ್ರಮದ ಕುರಿತು ಭರವಸೆ ನೀಡಿದ್ದರಾದರೂ ಏನೂ ಆಗುತ್ತಿಲ್ಲ ಎಂದು ಕೋಲಾರ ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್ ಪಾಷಾ ಅಸಮಾಧಾನ ವ್ಯಕ್ತಪಡಿಸಿದರು.
ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಕರೊನಾ ನಂತರ ಧಾರಣೆ ಸಂಪೂರ್ಣ ಕುಸಿದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ನಲ್ಲಿ ರೇಷ್ಮೆ ಬೆಳೆಗಾರರಿಗೆ ಯಾವುದೇ ಸಹಾಯ ಮಾಡದಿರುವುದು ರೈತರನ್ನು ಆತಂಕಕ್ಕೀಡುಮಾಡಿದೆ. ಈಗಿನ ಧಾರಣೆಗೆ ಕೂಲಿ ವೆಚ್ಚವೂ ಸಿಗುವುದಿಲ್ಲ. ಕೂಡಲೆ ಸರ್ಕಾರ ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ರಾಮನಗರದಲ್ಲಿ ಸಭೆ: ರಾಮನಗರದಲ್ಲಿ ಜಿಲ್ಲಾಧಿಕಾರಿ, ರಾಜ್ಯ ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ಪ್ರತಿನಿಧಿಗಳ ಜತೆ ನಡೆದ ಸಭೆಯಲ್ಲಿ ರೇಷ್ಮೆ ನೂಲು ಸಾಗಾಟಕ್ಕೆ ಅಂತರ್ ರಾಜ್ಯ ಪಾಸ್ ನೀಡುವುದು, ರೇಷ್ಮೆ ನೂಲು ಖರೀದಿ ಕೇಂದ್ರಕ್ಕೆ ರೀಲರ್‌ಗಳು ಸಲ್ಲಿಸಿದ ತಕ್ಷಣ ಶೇ.60 ಮೌಲ್ಯ ಪಾವತಿಸುವುದು, ಕಚ್ಚಾ ರೇಷ್ಮೆಯ ಪರೀಕ್ಷೆ ಮಾಡಿಸಿ ವರದಿ ನಂತರ ಉಳಿದ ಮೌಲ್ಯ ಪಾವತಿಸುವುದು, ಪ್ರತಿ ರೀಲರ್ ಕಡೆಯಿಂದ ವಾರಕ್ಕೆ 30 ಕೆಜಿ ನೂಲನ್ನು ಕೆಎಸ್‌ಎಂಬಿ ಮೂಲಕ ಖರೀದಿ ಮಾಡುವುದು, ರಾಮನಗರದಲ್ಲಿಯೇ ನೂಲಿನ ಗುಣಮಟ್ಟ ಪರೀಕ್ಷಾ ಯಂತ್ರ ಸ್ಥಾಪಿಸುವುದು. ಹಾಗೂ ಇದರ ವರದಿ ಬರುವವರೆಗೂ ಮಾರಾಟ ಮಾಡಲಾದ ನೂಲಿನ 60 ಭಾಗದ ಹಣವನ್ನು ರೀಲರ್‌ಗಳಿಗೆ ನೀಡುವುದು ಮತ್ತು ಉಳಿಕೆ ಹಣವನ್ನು ಗುಣಮಟ್ಟ ಖಾತ್ರಿ ವರದಿ ನೀಡಿ ಪಡೆದುಕೊಳ್ಳುವಂತೆ. ಹಾಗೂ ನೂಲು ಮಾರಾಟಕ್ಕೆ ಹೊರ ರಾಜ್ಯಕ್ಕೆ ಹೋಗಲು ಬೇಕಾದ ಅಂತರರಾಜ್ಯ ಪಾಸ್‌ಗಳನ್ನು ರೀಲರ್‌ಗಳಿಗೆ ಕೊಡಲು ಸರ್ಕಾರ ಒಪ್ಪಿರುವುದರಿಂದ ಗೂಡು ಖರೀದಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದಾಗಿ ರೀಲರ್‌ಗಳು ಒಪ್ಪಿಗೆ ಸೂಚಿಸಿದರು.
ರೀಲರ್ಸ್ ಹರಾಜು ಕೂಗದಿರುವ ಬಗ್ಗೆ ಮುಂಚೆಯೇ ತಿಳಿಸಿದ್ದರೆ ರೈತರು ಯಾರೂ ಗೂಡು ತರುತ್ತಿರಲಿಲ್ಲ. ಸಂಜೆಯವರೆಗೂ ಹರಾಜು ನಡೆಯದಿರುವುದರಿಂದ ಗೂಡನ್ನು ವಾಪಸ್ ಮನೆಗೆ ತೆಗೆದುಕೊಂಡು ಹೋಗುವಂತಾಗಿದೆ. ಪರಮೇಶ್ವರಯ್ಯ, ದೊಡ್ಡಸಬ್ಬೇನಹಳ್ಳಿ, ಮಾಲೂರು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನೂಲು ಖರೀದಿಸಲು ನಿಗದಿಪಡಿಸಿರುವ ಮಾನದಂಡಗಳು ಸರಿಯಿಲ್ಲ. ಒಬ್ಬ ರೀಲರ್ ವಾರಕ್ಕೆ 100 ಕೆಜಿ ನೂಲು ತಯಾರಿಸುವಾಗ 20 ಕೆಜಿ ಖರೀದಿಸಿದರೆ ಉಳಿದಿದ್ದನ್ನು ಏನು ಮಾಡಬೇಕು? ವಾರಕ್ಕೆ ಕನಿಷ್ಠ 50 ಕೆಜಿ ಖರೀದಿಸಿ ತಕ್ಷಣ ಹಣ ನೀಡಿದರೆ ರೈತರಿಂದ ಗೂಡು ಖರೀದಿಸಬಹುದು. ಅನ್ಸರ್ ಪಾಷಾ, ಅಧ್ಯಕ್ಷ, ಕೋಲಾರ ಸಿಲ್ಕ್ ರೀಲರ್ಸ್ ಅಸೋಸಿಯೇಷನ್