ಜಿಲ್ಲೆ

ಮುಚ್ಚಿದ ರೇಷ್ಮೆ ಮಾರುಕಟ್ಟೆ, ರೀಲರ್‌ಗಳ ಮನೆ ಬಾಗಿಲಿಗೆ ರೈತರ ಅಲೆದಾಟ

Kolar

ಕೋಲಾರ: ಕರೊನಾ ಸೋಂಕು ರೇಷ್ಮೆ ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೀಡುಮಾಡಿದೆ. ಧಾರಣೆ ಕುಸಿತದಿಂದ ಕಂಗಾಲಾಗಿರುವ ರೈತ ಇದೀಗ ರೀಲರ್‌ಗಳನ್ನು ಸಂಪರ್ಕಿಸಿ ಅವರ ಮನೆ ಬಾಗಿಲಿಗೆ ಹೋಗಿ ಗೂಡು ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಜಿಲ್ಲೆಯಲ್ಲಿ ಸುಮಾರು 20,000 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆದಿದ್ದು, ಸುಮಾರು 19000 ರೈತರು ರೇಷ್ಮೆ ಬೆಳೆಯುತ್ತಿದ್ದಾರೆ. ಮೂರ್ನಾಲ್ಕು ವಾರದಿಂದ ಗೂಡು ಧಾರಣೆ ಇಳಿಮುಖವಾಗುತ್ತಿದೆ. ಇದೀಗ ಗೂಡು ಮಾರಾಟಕ್ಕೂ ಸರ್ಕಾರಿ ಗೂಡು ಮಾರುಕಟ್ಟೆ ಇಲ್ಲದಂತಾಗಿದೆ.

ಏ.14ರವರೆಗೆ ಭಾರತ ಲಾಕ್‌ಡೌನ್ ಆಗಿದೆ. ರೇಷ್ಮೆ ಮಾರುಕಟ್ಟೆ ನಡೆದರೂ ನೂರಾರು ರೈತರು ಹಾಗೂ ರೀಲರ್‌ಗಳು ಗುಂಪು ಸೇರುವುದರಿಂದ ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಜಿಲ್ಲಾ ವ್ಯಾಪ್ತಿಯ ಗೂಡು ಮಾರುಕಟ್ಟೆ ಪೈಕಿ ಕೋಲಾರದಲ್ಲಿ ಇ-ಹರಾಜು ವ್ಯವಸ್ಥೆ ಇದ್ದರೂ ಗುಂಪು ಗೂಡುವುದನ್ನು ತಪ್ಪಿಸುವುದು ಕಷ್ಟ. ಕ್ಯಾಲನೂರು ಹಾಗೂ ಶ್ರೀನಿವಾಸಪುರ ಸರ್ಕಾರಿ ರೇಷ್ಮೆ ಗೂಡು ಮಾರಕಟ್ಟೆಯಲ್ಲಿ ತೆರೆದ ಹರಾಜು ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾದ್ದರಿಂದ ಜಿಲ್ಲಾಧಿಕಾರಿ ಸೂಚನೆಯಂತೆ ಎಲ್ಲ ಗೂಡು ಮಾರುಕಟ್ಟೆ ಮುಚ್ಚಲಾಗಿದೆ.

ರೈತರ ಅಲೆದಾಟ: ರೀಲರ್‌ಗಳನ್ನು ನೇರವಾಗಿ ಸಂಪರ್ಕಿಸಿ ಸ್ಥಳೀಯವಾಗಿ ಗೂಡು ಮಾರಾಟ ಮಾಡಿಕೊಳ್ಳುವಂತೆ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ಅಧಿಕಾರಿಗಳು ರೈತರಿಗೆ ಸೂಚಿಸಿದ್ದರಿಂದ ರೈತರು ರೀಲರ್‌ಗಳ ಮನೆ ಬಾಗಿಲಿಗೆ ಗೂಡು ತೆಗೆದುಕೊಂಡು ಹೋಗುವಂತಾಗಿದೆ.

ಅಧಿಕಾರಿಗಳು ಕೋಲಾರ, ಕ್ಯಾಲನೂರು, ಶ್ರೀನಿವಾಸಪುರ ಭಾಗದ ರೀಲರ್‌ಗಳ ಮೊಬೈಲ್ ಸಂಖ್ಯೆಯನ್ನು ಜಾಲತಾಣದಲ್ಲಿ ಹಂಚಿಕೊಂಡು ರೈತರಿಗೆ ನೆರವಾಗಿದ್ದಾರೆ.

ಸಿಕ್ಕಿದ ಬೆಲೆಗೆ ಮಾರಾಟ: ಕೋಲಾರದಲ್ಲಿ 280, ಶ್ರೀನಿವಾಸಪುರದಲ್ಲಿ 97, ಕ್ಯಾಲನೂರಿನಲ್ಲಿ 100ಕ್ಕೂ ಹೆಚ್ಚು ರೀಲರ್‌ಗಳಿದ್ದು, ರೇಷ್ಮೆನೂಲು ಮಾರಾಟವೂ ಕಷ್ಟವಾಗಿ ಕೆಜಿ ಧಾರಣೆ 2000ರಿಂದ 2500ರೂಗೆ, ಬೈವೋಲ್ಟೀನ್ ಗೂಡು 257ರಿಂದ 325 ರೂ., ದ್ವಿತಳಿ 200ರಿಂದ 250 ರೂ.ಗೆ ಕುಸಿದಿದೆ. ಇತ್ತ ರೈತ ಗೂಡುಗಳನ್ನು ಇಟ್ಟುಕೊಳ್ಳಲು ಸಾಧ್ಯವಾಗದೆ ಸಿಕ್ಕಿದ ಬೆಲೆಗೆ ಮಾರಿ ಕೈ ತೊಳೆದುಕೊಳ್ಳುತ್ತಿದ್ದಾರೆ.

ಅತ್ತ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವ ರೀಲರ್‌ಗಳು ಮುಂದೊಂದು ದಿನ ಉತ್ತಮ ಬೆಲೆ ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿ ಗೂಡು ಖರೀದಿಸಿ ನೂಲು ತೆಗೆದು ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಸಣ್ಣ ಪುಟ್ಟ ರೀಲರ್‌ಗಳದ್ದು ಅತಂತ್ರ ಸ್ಥಿತಿ.

ಸರ್ಕಾರಕ್ಕೂ ನಷ್ಟ: ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆಯಿಂದ ಶೇ.1 ತೆರಿಗೆ ಸರ್ಕಾರಕ್ಕೆ ಸಂದಾಯವಾಗುತ್ತಿತ್ತು. ಪ್ರಸ್ತುತ ಮಾರುಕಟ್ಟೆ ಮುಚ್ಚಿ ರೀಲರ್‌ಗಳ ಮನೆ ಬಾಗಿಲಿಗೆ ಹೋಗಿ ಮಾರಾಟ ಮಾಡಬೇಕಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ.

ಗೂಡು ಮಾರುಕಟ್ಟೆ ಮುಚ್ಚಿರುವುದರಿಂದ ರೀಲರ್‌ಗಳನ್ನು ಹುಡುಕಿಕೊಂಡು ಮನೆ ಬಾಗಿಲಿಗೆ ಹೋಗಿ ಗೂಡು ಮಾರುವಂತಾಗಿದೆ. ಧಾರಣೆ ಕುಸಿದಿದೆ, ಹೊಸದಾಗಿ ರೇಷ್ಮೆ ಮೊಟ್ಟೆ ಮೇಯಿಸಲು ಸದ್ಯಕ್ಕೆ ಅವಕಾಶ ಇಲ್ಲ. ನಾಗನಾಳ ಶ್ರೀನಿವಾಸ್, ರೇಷ್ಮೆ ಬೆಳೆಗಾರ ಮಾ.24ರಿಂದ ರೇಷ್ಮೆ ಚಾಕಿ ಸ್ಥಗಿತಗೊಳಿಸಲಾಗಿದ್ದು, ಈಗಾಗಲೇ ರೈತರು ಮೇಯಿಸುತ್ತಿರುವ ಹುಳುಗಳಿಂದ ಏಪ್ರಿಲ್ ಅಂತ್ಯದವರೆಗೆ ಗೂಡು ಬರಬಹುದು. ನಿತ್ಯ 15 ಟನ್‌ನಷ್ಟು ಗೂಡು ನಿರೀಕ್ಷಿಸಲಾಗಿದ್ದು, ಇಲಾಖೆ ಅಧಿಕಾರಿಗಳನ್ನು ನಿಯೋಜಿಸಿ ಇರುವ ಗೂಡು ವಿಲೇವಾರಿಗೆ ಕ್ರಮವಹಿಸಿ ರೈತರಿಗೆ ಧಾರಣೆಯಲ್ಲಿ ಅನ್ಯಾಯ ಮಾಡದಂತೆ ರೀಲರ್‌ಗಳಿಗೆ ಮನವಿ ಮಾಡಲಾಗಿದೆ. ಎಂ.ಕೆ. ಪ್ರಭಾಕರ್, ಉಪನಿರ್ದೇಶಕರು, ರೇಷ್ಮೆ ಇಲಾಖೆ, ಕೋಲಾರ