ಜಿಲ್ಲೆ

ಸೈಲೆಂಟ್ ಆಗಿದ್ದ ರಾಜ್ಯ ಬಿಜೆಪಿ ಡ್ಯಾಮೇಜ್ ಕಂಟ್ರೋಲ್​ಗೆ ದೌಡು: ರೌಡಿ ಸುನೀಲ ಜತೆ ವೇದಿಕೆ ಹಂಚಿಕೊಂಡ ಸಂಸದರಿಗೆ ಶಾಕ್

ಬೆಂಗಳೂರು: ನಿನ್ನೆಯಿಂದ ಮಾಧ್ಯಮದಲ್ಲಿ ರೌಡಿ ಸೈಲೆಂಟ್ ಸುನೀಲ (Silent sunila) ನ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಮೊನ್ನೆ (ನ.27) ಸೈಲೆಂಟ್ ಸುನೀಲ್​ ನೇತೃತ್ವದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಬಿಜೆಪಿ ನಾಯಕರು ಪಾಲ್ಗೊಂಡ ಬಳಿಕ ಸುನೀಲ ಬಿಜೆಪಿ (BJP) ಸೇರುತ್ತಾನೆ ಮತ್ತು ಚಾಮರಾಜಪೇಟೆ (Chamarajapet) ಕ್ಷೇತ್ರದಿಂದ ಸ್ಪರ್ಧಿಸುತ್ತಾನೆ ಎಂಬ ವಿಚಾರ ಹರಿದಾಡುತ್ತಿದ್ದು, ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಅಲ್ಲದೆ, ಬಿಜೆಪಿ ವಿರುದ್ಧ ಸಾಕಷ್ಟು ಟೀಕೆಗಳು ಸಹ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಪಕ್ಷದ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ (Nalin Kumar Kateel) ಪತ್ರಿಕಾ ಪ್ರಕಟಣೆ ಹೊರಡಿಸಿ, ಸ್ಪಷ್ಟನೆ ನೀಡಿದ್ದಾರೆ.

ಸಾಕಷ್ಟು ಟೀಕೆಗಳು ವ್ಯಕ್ತವಾದರೂ ಇಷ್ಟು ದಿನ ಸೈಲೆಂಟ್ ಆಗಿದ್ದ ಬಿಜೆಪಿ ತಡವಾಗಿ ಎಚ್ಚೆತ್ತುಕೊಂಡು, ಡ್ಯಾಮೇಜ್ ಕಂಟ್ರೋಲ್​ಗೆ ದೌಡಾಯಿಸಿದೆ. ಅಷ್ಟೇ ಅಲ್ಲ, ಸೈಲೆಂಟ್ ಸುನಿಲ್ ಜತೆಗೆ ವೇದಿಕೆಯಲ್ಲಿದ್ದ ನಾಯಕರಿಗೆ ಶಾಕ್ ನೀಡಿದೆ‌. ಯಾವುದೇ ಕಾರಣಕ್ಕೂ ಸೈಲೆಂಟ್ ಸುನಿಲ್ ಪಕ್ಷ ಸೇರ್ಪಡೆಗೆ ಅವಕಾಶವಿಲ್ಲ. ಉಗ್ರಗಾಮಿಗಳು, ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲಿಸುವವರು ಹಾಗೂ ಅಪರಾಧ ಹಿನ್ನೆಲೆಯವರಿಗೆ ಪಕ್ಷಕ್ಕೆ ನೋ ಎಂಟ್ರಿ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಸಾರಿದ್ದಾರೆ‌.

ವಿವರಣೆಗೆ ಫರ್ಮಾನು

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಂದ ವಿವರಣೆ ನೀಡುವಂತೆ ಫರ್ಮಾನು ಹೊರಡಿಸಲು ಪಕ್ಷದ ರಾಜ್ಯಾಧ್ಯಕ್ಷ ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಆಗದಂತೆ ಎಚ್ಚರಿಕೆವಹಿಸಲು ತಾಕೀತು ಮಾಡಿದ್ದಾರೆ. ಏನೇ ಇದ್ದರೂ ಪಕ್ಷದ ಗಮನಕ್ಕೆ ತರಬೇಕೆಂದೂ ಸೂಚಿಸಿದ್ದಾರೆ.

ಈ ಮಧ್ಯೆ ನವದೆಹಲಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಪ್ರತಿಕ್ರಿಯಿಸುವ ವೇಳೆ ಕಾಂಗ್ರೆಸ್​ನಲ್ಲಿ ಎಷ್ಟು ರೌಡಿಶೀಟರ್​ಗಳಿದ್ದಾರೆ ಲೆಕ್ಕ ಹಾಕಲಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ಚಾಮರಾಜಪೇಟೆಯಲ್ಲಿ ಮೂರು ದಿನಗಳ ಹಿಂದೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೈಲೆಂಟ್ ಸುನಿಲ್ ಜತೆಗೆ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಬಿಜೆಪಿ ದಕ್ಷಿಣ ಜಿಲ್ಲಾ ಘಟಕದ ಮುಖಂಡರು ಪಾಲ್ಗೊಂಡಿದ್ದರು.