ತೇರದಾಳ: ರಾಜ್ಯ ಪೌರ ನೌಕರರ ಸಂಘ ಕರೆಕೊಟ್ಟ ಪೌರ ಕಾರ್ಮಿಕರು ಹಾಗೂ ನೀರು ಸರಬರಾಜು ಕಾರ್ಮಿಕರ ಕೈಗೊಂಡಿರುವ ಮೌನ ಧರಣಿಗೆ ಪಟ್ಟಣದ ಪುರಸಭೆ ಪೌರಕಾರ್ಮಿಕರು, ನೀರು ಸರಬರಾಜು ಕಾರ್ಮಿಕರು ಹಾಗೂ ವಾಹನ ಚಾಲಕರು ಶನಿವಾರ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಕೆಲಸ ನಿರ್ವಹಿಸುವ ಮೂಲಕ ಬೆಂಬಲ ಸೂಚಿಸಿದರು.
ಪೌರಕಾರ್ಮಿಕ ಮಂಜುನಾಥ ರಾಯಣ್ಣವರ ಮಾತನಾಡಿ, ರಾಜ್ಯ ಸರ್ಕಾರ ಪೌರಕಾರ್ಮಿಕರನ್ನು, ನೀರು ಸರಬರಾಜು ಕಾರ್ಮಿಕರನ್ನು ಹಾಗೂ ಕಸ ಸಂಗ್ರಹ ವಾಹನ ಚಾಲಕರನ್ನು ಖಾಯಂಗೊಳಿಸಿ ಸರ್ಕಾರವೇ ನೇರವಾಗಿ ವೇತನ ಪಾವತಿಸಬೇಕು. ಕಳೆದ ಬಾರಿ ಖಾಯಂಗೊಳಿಸಿದ ಪೌರಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಯಿಂದ ವೇತನ ಸಮರ್ಪಕವಾಗಿ ಪಾವತಿಯಾಗುತ್ತಿಲ್ಲ. ಆ ಕಾರಣಕ್ಕಾಗಿಯೇ ತೇರದಾಳ ಪುರಸಭೆಯ ಪೌರಕಾರ್ಮಿಕರಿಗೆ ನಾಲ್ಕು ತಿಂಗಳಿಂದ, ನೀರು ಸರಬರಾಜಿನವರಿಗೆ 8 ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ದಿನನಿತ್ಯ ಖರ್ಚು, ಮಕ್ಕಳ ಶಿಕ್ಷಣ ಹಾಗೂ ಆಸ್ಪತ್ರೆ ವೆಚ್ಚಗಳಿಗಾಗಿ ಪರದಾಡುವ ಸ್ಥಿತಿ ಬಂದೊದಗಿದೆ. ರಾಜ್ಯದ ಒಕ್ಕೂಟ ಈ ಧರಣಿಗೆ ಕರೆ ನೀಡಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಾವು ನಮ್ಮ ಕೆಲಸ ನಿರ್ವಹಿಸುತ್ತ ಮೌನ ಧರಣಿ ಆರಂಭಿಸಿದ್ದೇವೆ ಎಂದರು.
ರವಿ ಬನಸೋಡೆ ಮಾತನಾಡಿ, ಸರ್ಕಾರ ಎರಡು ಬಾರಿ ಬಜೆಟ್‌ನಲ್ಲಿ ಘೋಷಿಸಿದ್ದರೂ ಪೌರಕಾರ್ಮಿಕರಿಗೆ, ನೀರು ಸರಬರಾಜು ಹಾಗೂ ವಾಹನ ಚಾಲಕರಿಗೆ ನೇರ ವೇತನ ಪಾವತಿ ಮಾಡಿಲ್ಲ. ಈ ಕುರಿತು ಸಚಿವರ ಮನೆ ಮುಂದೆ ಧರಣಿ ಕೈಗೊಂಡ ಮೇಲೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುವ ಭರವಸೆ ನೀಡಿದರು. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಇಂದಿನಿಂದ 45 ದಿನಗಳವರೆಗೆ ಮೌನ ಪ್ರತಿಭಟನೆ ನಡೆಸಲಾಗುವುದು. ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ನಂತರ ಉಗ್ರ ಹೋರಾಟಕ್ಕೆ ಕ್ರಮವಹಿಸಲಾಗುವುದು ಎಂದರು.
ದಯಾನಂದ ಮಾಂಗ, ರವಿ ರೋಡಕರ, ಘಟಿಗೆಪ್ಪ ಕುಂಬಾರ, ರಘು ಗೋಠಡಕಿ, ಶಂಭು ಮಾಸ್ತಿ, ಅಶೋಕ ನಡುವಿನಕೇರಿ, ಮಚ್ಚೆಂದ್ರ ಗೋಠಡಕಿ, ಭರತೇಶ ಗುಡಕ್ಕನವರ, ಸುನೀಲ ಬಾಂವಿ, ಸಿದ್ದು ಮಾಂಗ, ಭಾರತಿ ಮಾಸ್ತಿ, ಶೋಭಾ ಮಾಂಗ, ಗೌರವ್ವ ಮಾಸ್ತಿ, ಶೋಭಾ ಮಾಸ್ತಿ, ರೇಣುಕಾ ಸಿಂಗೆ, ಸಪ್ನಾ ಮಾಸ್ತಿ, ಕಾಂತವ್ವ ಬಿದರಿ ಇದ್ದರು.