ಸವಣೂರ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶ ಘೊಷಣೆ ನಂತರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ದೌರ್ಜನ್ಯ ಖಂಡಿಸಿ ಬಿಜೆಪಿ ತಾಲೂಕು ಘಟಕ ಪದಾಧಿಕಾರಿಗಳು ಪಟ್ಟಣದಲ್ಲಿ ಬುಧವಾರ ಮೌನ ಪ್ರತಿಭಟನೆ ನಡೆಸಿದರು.
ಪಶ್ಚಿಮ ಬಂಗಾಳದಲ್ಲಿ ಭಯದ ವಾತಾವರಣ ಸೃಷ್ಟಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ 140ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಟಿಎಂಸಿ ಗೂಂಡಾ ವರ್ತನೆಗೆ ಬಲಿಯಾಗಿದ್ದಾರೆ. ವಿಧಾನಸಭೆ ಚುನಾವಣೆ ಫಲಿತಾಂಶ ಬಂದು 2 ದಿನಗಳಲ್ಲಿ ಹತ್ತಾರು ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ, ಆಕ್ರಮಣ, ಮನೆಗೆ ನುಗ್ಗಿ ದಾಳಿ ಮಾಡಿರುವ ಘಟನೆ ಖಂಡನೀಯ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ತಕ್ಷಣ ಬಂಧಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ತಹಸೀಲ್ದಾರ್ ಸಿ.ಎಸ್. ಭಂಗಿ, ತಾಪಂ ಇಒ ಮುನಿಯಪ್ಪ ಪಿ. ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಬಿಜೆಪಿ ತಾಲೂಕಾಧ್ಯಕ್ಷ ಗಂಗಾಧರ ಬಾಣದ, ಪ್ರಧಾನ ಕಾರ್ಯದರ್ಶಿಗಳಾದ ಚನ್ನಬಸಯ್ಯ ದುರ್ಗದಮಠ, ಶ್ರೀನಿವಾಸ ಗಿತ್ತೆ, ಯುವ ಮೋರ್ಚಾ ಅಧ್ಯಕ್ಷ ಹರೀಶ ಕ್ಷೌರದ, ಎಸ್ಸಿ ಮೋರ್ಚಾ ಅಧ್ಯಕ್ಷ ಶ್ರೀಕಾಂತ ಲಕ್ಷ್ಮೇಶ್ವರ, ಪದಾಧಿಕಾರಿಗಳಾದ ಎಚ್.ಎಂ. ಮುದಿಗೌಡ್ರ, ಪ್ರಕಾಶ ಮುದಿಗೌಡ್ರ, ಶಂಕರ ಪಾಟೀಲ, ರಾಮಣ್ಣ ಸಂಕ್ಲಿಪೂರ, ಪ್ರವೀಣ ಬಾಲೆಹೊಸೂರ, ಸಂತೋಷ ಗುಡಿಸಾಗರ ಇತರರಿದ್ದರು.
ರಾಜಕೀಯ ಹಿಂಸೆ ತಡೆಯಿರಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಹಾವೇರಿ ಜಿಲ್ಲಾ ಬಿಜೆಪಿಯಿಂದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರಿಗೆ ಮನವಿ ಸಲ್ಲಿಸಲಾಯಿತು. ಚುನಾವಣೆಗಳು ಸೋಲು ಮತ್ತು ಗೆಲುವಿಗೆ ಸೀಮತವಾಗಿರಬೇಕು. ಕೊಲೆಯ ತನಕ ಹೋಗಬಾರದು. ಪಶ್ಚಿಮ ಬಂಗಾಳದಲ್ಲಿ ಎಲ್ಲವನ್ನೂ ಮೀರಿ ತೃಣಮೂಲ ಕಾಂಗ್ರೆಸ್ನ ಕಾರ್ಯಕರ್ತರು ಹಾಗೂ ಮಮತಾ ಬ್ಯಾನರ್ಜಿಯ ಹಿಂಬಾಲಕರು ಬಿಜೆಪಿ ಕಾರ್ಯಕರ್ತರನ್ನು ಮನಬಂದಂತೆ ಥಳಿಸುತ್ತಿದ್ದಾರೆ. ಬಿಜೆಪಿ ಮತದಾರರ ಮೇಲೆಯೂ ಈ ದಾಳಿಗಳನ್ನು ನಡೆಸಲಾಗುತ್ತಿದೆ. ಇದು ದೇಶಕ್ಕೆ ಕಪ್ಪು ಚುಕ್ಕೆಯಾಗಿದೆ. ಕೂಡಲೆ ಪ್ರಧಾನ ಮಂತ್ರಿ ಮಧ್ಯೆ ಪ್ರವೇಶಿಸಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸೆಯನ್ನು ತಡೆಯಲು ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕಾರ್ಯಕರ್ತರಿಗೆ ರಕ್ಷಣೆ ನೀಡಲು ಆಗ್ರಹ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ನೀಡುವಂತೆ ಪಕ್ಷದ ಹಿರೇಕೆರೂರ ತಾಲೂಕು ಮಂಡಳದಿಂದ ತಹಸೀಲ್ದಾರ್ ಉಮಾ ಕೆ.ಎ. ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಬಿಜೆಪಿ ಮಂಡಳ ತಾಲೂಕಾಧ್ಯಕ್ಷ ಷಣ್ಮುಖಯ್ಯ ಮಳಿಮಠ ಮಾತನಾಡಿ, ಬಿಜೆಪಿ ಕಾರ್ಯಕರ್ತರನ್ನು ಕೊಲೆಗೈದ, ಮನೆಗಳಿಗೆ ಬೆಂಕಿ ಹಚ್ಚಿದವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಪಟ್ಟಣದ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಪಪಂ ಉಪಾಧ್ಯಕ್ಷೆ ಸುಧಾ ಚಿಂದಿ, ಪಪಂ ಸದಸ್ಯರಾದ ಕಂಠಾಧರ ಅಂಗಡಿ, ಹನುಮಂತಪ್ಪ ಕುರಬರ, ಪಪಂ ಮಾಜಿ ಅಧ್ಯಕ್ಷ ರಾಜಶೇಖರ ಹಂಪಾಳಿ, ರಮೇಶ ಬಾತವ್ವನವರ ಇದ್ದರು.
ಜೀವಭದ್ರತೆಗೆ ಆದ್ಯತೆ ನೀಡಿ: ಹಾನಗಲ್ಲ ಬಿಜೆಪಿ ತಾಲೂಕು ಘಟಕದಿಂದ ತಹಸೀಲ್ದಾರ್ ಪಿ.ಎಸ್. ಯರ್ರಿಸ್ವಾಮಿ ಅವರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು. ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಹೀನಾಯವಾಗಿ ಸೋಲು ಅನುಭವಿದ್ದರಿಂದ ಹತಾಶೆಗೊಂಡಿರುವ ಟಿಎಂಸಿ ಕಾರ್ಯಕರ್ತರು ಹಿಂಸಾ ಕೃತ್ಯಕ್ಕೆ ಮುಂದಾಗಿದ್ದಾರೆ. ಜನರ ಜೀವಭದ್ರತೆಗೆ ಆದ್ಯತೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ನಿಂಗಪ್ಪ ಗೊಬ್ಬೇರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಒಬಿಸಿ ಮೋರ್ಚಾ ಉಪಾಧ್ಯಕ್ಷ ಭೋಜರಾಜ ಕರೂದಿ, ತಾಲೂಕು ಪ್ರಧಾನ ಕಾರ್ಯದರ್ಶಿ ಮಹೇಶ ಕಮೊಡೊಳ್ಳಿ, ಪುರಸಭೆ ಸದಸ್ಯೆ ಹಸೀನಾಬಿ ನಾಯ್ಕನವರ, ಭಾಸ್ಕರ ಹುಲಮನಿ, ಸಂತೋಷ ಭಜಂತ್ರಿ, ಮಂಜುನಾಥ ಬಸವಂತಕರ, ಅಜಯ ರೂಗಿಶೆಟ್ಟರ, ಡಿ.ಜಿ. ತಿಪ್ಪೆಗೊಂಡರ ಇದ್ದರು.