ಕೊಳ್ಳೇಗಾಲ: ವೇತನ ವಿಳಂಬ ಹಾಗೂ ಕಷ್ಟ ಪರಿಹಾರ ಭತ್ಯೆಯನ್ನು ನೀಡುವಂತೆ ಆಗ್ರಹಿಸಿ ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರ ಮೇಲೆ ಸೇವೆ ಸಲ್ಲಿಸುತ್ತಿರುವ ಎಪಿಸಿ ಕ್ಯಾಂಪ್ ವಾಚರ್‌ಗಳು ಮೌನ ಪ್ರತಿಭಟನೆ ನಡೆಸಿದರು.
ಪಟ್ಟಣದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಕಚೇರಿ ಮುಂಭಾಗ ಸೋಮವಾರ ರಾಮಪುರ, ಪಾಲರ್, ಪಿ.ಜಿ.ಪಾಳ್ಯ, ಮಲೆ ಮಹದೇಶ್ವರ ಬೆಟ್ಟ ಹಾಗೂ ಹನೂರು ವಲಯಕ್ಕೆ ಸೇರಿದ ಸುಮಾರು 50 ಕ್ಕೂ ಹೆಚ್ಚು ವಾಚಾರ್‌ಗಳು ಅಳಲು ವ್ಯಕ್ತಪಡಿಸಿದರು.
ವಾಚರ್ ಎಸ್.ಮಹೇಶ್ ಮಾತನಾಡಿ, ಹೊರಗುತ್ತಿಗೆ ಅಡಿಯಲ್ಲಿ ವಾಚರ್‌ಗಳಾಗಿ ಕಾರ್ಯ ನಿರ್ವಹಿಸುವುದು ಬಹಳ ಕಷ್ಟವಾಗಿದೆ. 4 ತಿಂಗಳಿಂದ ನಮಗೆ ವೇತನ ನೀಡಿಲ್ಲ. ಕುಟುಂಬದ ನಿರ್ವಹಣೆ ಕಷ್ಟವಾಗಿದೆ. ಮಕ್ಕಳ ವಿದ್ಯಾಭ್ಯಾಸ ನಮ್ಮ ಅನಾನೂಕೂಲ ವ್ಯವಸ್ಥೆಗೆ ನಲುಗುತ್ತಿದೆ. ಖಾಯಂ ವಾಚರ್‌ಗಳಂತೆ ನಾವು ಕರ್ತವ್ಯ ನಿರ್ವಹಿಸುತ್ತೇವೆ. ಅರಣ್ಯದ ಬಗ್ಗೆ ನಮಗೆ ಭಾವನಾತ್ಮಕ ಸಂಬಂಧವಿದೆ. ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಕೆಲಸವನ್ನು ಗೌರವಯುತವಾಗಿ ಮಾಡುತ್ತಿದ್ದೇವೆ. ವೇತನ ವಿಳಂಬ ಏಕೆ ಆಗಿದೆ ಎಂಬುದು ನಮಗೆ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಮಷ್ಟೆ ಕೆಲಸ ಮಾಡುವ ಖಾಯಂ ವಾಚರ್‌ಗಳಿಗೆ ಸಕಾಲಕ್ಕೆ ಸಂಬಳವಾಗುತ್ತಿದೆ. ಆದರೆ ನಮಗೆ ವಿಳಂಬ ವಾಗುತ್ತಿದೆ. ನಿಜಕ್ಕೂ ಹೊರಗುತ್ತಿಗೆ ಎಂಬುದು ನಮಗೆ ಶಾಪವಾಗಿ ಕಾಡುತ್ತಿದೆ. ಕೊಡುವ ಕಡಿಮೆ ಸಂಬಳವೇ ಸರಿಯಾಗಿ ಬಾರದೆ ಬದುಕು ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.
ಎರಡು ವರ್ಷದಿಂದ ವಾಚರ್‌ಗಳಿಗೆ ಸರ್ಕಾರ ಕಷ್ಟ ಪರಿಹಾರ ಭತ್ಯೆ ನೀಡುತ್ತಿದೆ. ತಿಂಗಳಿಗೆ 2 ಸಾವಿರ ರೂ. ಈ ಯೋಜನೆಯಿಂದ ದೊರೆಯಲಿದೆ. ಈ ಹಣವು ನಮಗೆ ಸಿಕ್ಕಿಲ್ಲ. ಕಾವೇರಿ ವನ್ಯ ಜೀವಿ ವಿಭಾಗದ ವಾಚರ್‌ಗಳಿಗೆ ವೇತನ ಸಕಾಲಕ್ಕೆ ಲಭ್ಯವಾಗಿದೆ. ಆದರೆ ನಮ್ಮಲ್ಲಿ 4 ತಿಂಗಳಾದರೂ ಹಾಕಿಲ್ಲ ಎಂದು ಅಳಲು ತೋಡಿಕೊಂಡರು.
ಈ ವೇಳೆ ವಿಜಯ ಸೇನೆ ಉಪಾಧ್ಯಕ್ಷ ಶ್ರೀನಿವಾಸ್ , ವಾಚರ್‌ಗಳಾದ ಮಾದೇಶ್, ಸಕಾಯರಾಜ್, ಬಸವ ರಾಜು, ಮಾದೇಶ್ ಇತರರು ಇದ್ದರು.